ಬೆಂಗಳೂರು, ಜ. ೪: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಹಾಗೂ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರಕಾರ ಬಿಗಿಕ್ರಮ ಕೈಗೊಂಡಿದೆ. ಹಲವು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದು, ಸೋಂಕಿನ ಹತೋಟಿಗೆ ಕೈಜೋಡಿಸುವಂತೆ ಸರಕಾರ ಮನವಿ ಮಾಡಿದೆ.

ಬೆಂಗಳೂರಿನಲ್ಲಿ ತಜ್ಞರ ಸಭೆಯ ಬಳಿಕ ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸುದ್ದಿಗಾರರೊಂದಿಗೆ ಬಿಗಿಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಸರ್ಕಾರ ಕೆಲವೊಂದು ನಿಯಮಗಳನ್ನು ರೂಪಿಸಿದ್ದು ಇವೆಲ್ಲವೂ ಮುಂದಿನ ೨ ವಾರಗಳ ಕಾಲ ಜಾರಿಯಲ್ಲಿರಲಿದೆ.

ವೀಕೆಂಡ್ ಕರ್ಫ್ಯೂ

ತಾ.೭ರ ರಾತ್ರಿ ೧೦ ಗಂಟೆಯಿAದ ಮುಂದಿನ ಸೋಮವಾರ ಬೆಳಿಗ್ಗೆ ೫ ಗಂಟೆಯ ತನಕ ೨ ವಾರಗಳ ಕಾಲ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ ಇರಲಿದೆ ಎಂದು ಕಂದಾಯ ಸಚಿವ ಅಶೋಕ್ ತಿಳಿಸಿದರು.

ಆಹಾರ, ಹಾಲು, ತರಕಾರಿ, ಹೊಟೇಲ್‌ಗಳಲ್ಲಿ ಪಾರ್ಸಲ್, ಅಗತ್ಯ ಸೇವೆ ಹೊರತುಪಡಿಸಿದಂತೆ ಉಳಿದೆಲ್ಲ ಕಾರ್ಯಚಟುವಟಿಕೆಗಳು ಈ ಸಂದರ್ಭ ಬಂದ್ ಆಗಲಿವೆ. ವೈದ್ಯಕೀಯ, ಮೆಡಿಕಲ್ ಸೇವೆಗಳು ಎಂದಿನAತೆ ಇರಲಿವೆ. ನೈಟ್ ಕರ್ಫ್ಯೂ ಕೂಡ ಮುಂದಿನ ೨ ವಾರಗಳು ವಿಸ್ತರಿಸಲಾಗಿದೆ ಎಂದು ಹೇಳಿದರು.

ಸರಕಾರಿ ಕಚೇರಿ ಹಾಗೂ ಇತರೆ ಕಚೇರಿಗಳಲ್ಲಿ ಭಾರತ ಸರಕಾರದ ನಿಯಮದಂತೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಚಿತ್ರಮಂದಿರ, ಮಾಲ್, ಬಾರ್, ಪಬ್, ಜಿಮ್, ಈಜುಕೊಳ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಶೇ. ೫೦ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದ್ದು, ಬರುವವರು ಕಡ್ಡಾಯ ೨ ಡೋಸ್ ಲಸಿಕೆ ಪಡೆದಿರಬೇಕು ಎಂದು ಸ್ಪಷ್ಟಪಡಿಸಿದರು.

(ಮೊದಲ ಪುಟದಿಂದ)

ಮದುವೆಗೆ ಮಿತಿ

ಮದುವೆ ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಸಂಖ್ಯೆಗೆ ಸರಕಾರ ಮಿತಿ ಹೇರಿದೆ. ಮದುವೆ ಹೊರಾಂಗಣದಲ್ಲಿದ್ದರೆ ೨೦೦, ಓಳಾಂಗಣದಲ್ಲಿದ್ದರೆ ೧೦೦ ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ೨ ಡೋಸ್ ಲಸಿಕೆ ಕಡ್ಡಾಯ ಪಡೆದಿರಬೇಕು.

ಗಡಿಗಳ ಮೇಲೆ ಹದ್ದಿನ ಕಣ್ಣು

ಓಮಿಕ್ರಾನ್ ತಡೆಗೆ ಗಡಿಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ವಿಶೇಷವಾಗಿ ರಾಜ್ಯಕ್ಕೆ ಹೊಂದಿಕೊAಡಿರುವ ಮಹಾರಾಷ್ಟç, ಕೇರಳ ಹಾಗೂ ಗೋವಾ ಗಡಿಗಳಲ್ಲಿ ಬಿಗಿಕ್ರಮಕ್ಕೆ ಸರಕಾರ ಮುಂದಾಗಿದೆ.

ಹೊರರಾಜ್ಯದಿಂದ ಬರುವವರಿಗೆ ಕೋವಿಡ್ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ೨ ಡೋಸ್ ಕೋವಿಡ್ ನಿರೋಧಕ ಲಸಿಕೆಯನ್ನು ಪಡೆದಿರಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಬಹಿರಂಗ ಕಾರ್ಯಕ್ರಮಕ್ಕೆ ಕಡಿವಾಣ

ಸಂಘ ಸಂಸ್ಥೆಗಳ ಬಹಿರಂಗ ಕಾರ್ಯಕ್ರಮ, ರ‍್ಯಾಲಿ, ಜಾತ್ರೆ, ಪಕ್ಷಗಳ ಸಮಾವೇಶ ಸೇರಿದಂತೆ ಜನಸೇರಬಹುದಾದ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.

ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ನಿಯಮ ರೂಪಿಸಲಾಗಿದೆ. ಜನರ ಹಿತಕಾಯಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಮನವಿ ಮಾಡಿದರು. ಅಲ್ಲದೆ, ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ಎಚ್ಚರಿಸಿದರು.

ಎಲ್ಲಾ ರೀತಿಯ ಧಾರ್ಮಿಕ ಕೇಂದ್ರಗಳ ದರ್ಶನಕ್ಕೆ ೫೦ ಭಕ್ತಾದಿಗಳಿಗೆ ಮಿತಿ ವಿಧಿಸಲಾಗಿದೆ. ಎಂದಿನAತೆ ಪೂಜೆ, ಪುನಸ್ಕಾರ ನಡೆಯಲಿದೆ.

ಸಾರಿಗೆ ವ್ಯವಸ್ಥೆಗೆ ಪ್ರತ್ಯೇಕ ನಿಯಮ

ಮೆಟ್ರೋ, ಕೆ.ಎಸ್.ಆರ್.ಟಿ.ಸಿ. ಹಾಗೂ ಬಿ.ಎಂ.ಟಿ.ಸಿ. ಸೇವೆಗೆ ಸಂಬAಧಪಟ್ಟAತೆ ಪ್ರತ್ಯೇಕ ನಿಯಮ ಜಾರಿಯಾಗಲಿದೆ. ಇದನ್ನು ಸದ್ಯದಲ್ಲಿ ತಿಳಿಸಲಾಗುವುದು ಎಂದು ಆರ್.ಅಶೋಕ್ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಮಾತ್ರ ಅನ್ವಯಿಸುವಂತೆ ೧೦ನೇ ತರಗತಿ, ದ್ವಿತೀಯ ಪಿಯುಸಿ ತರಗತಿಗಳು, ಮೆಡಿಕಲ್, ಪ್ಯಾರ ಮೆಡಿಕಲ್, ನರ್ಸಿಂಗ್ ಕಾಲೇಜು ಹೊರತುಪಡಿಸಿದಂತೆ ಉಳಿದೆಲ್ಲ ತರಗತಿಗಳು ಬಂದ್ ಆಗಲಿವೆ ಎಂದರು.