ಮಡಿಕೇರಿ, ಜ. ೪: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಅನುಷ್ಠಾನ ಗೊಂಡಿರುವ ಗಂಗಾ ಕಲ್ಯಾಣ ಯೋಜನೆಯಡಿ ಬಾಕಿ ಇರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವನ್ನು ಮುಂದಿನ ಒಂದು ತಿಂಗಳೊಳಗಡೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಗಂಗಾ ಕಲ್ಯಾಣ ವಿಶೇಷ ಸದನ ಸಮಿತಿ ಅಧ್ಯಕ್ಷ ಡಾ. ವೈ.ಎ. ನಾರಾಯಣ ಸ್ವಾಮಿ ವಿವಿಧ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗಂಗಾ ಕಲ್ಯಾಣ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆಯ ಪ್ರಗತಿ ಪರಿಶೀಲಿಸಿದ ಸಂದರ್ಭ ಹಲವು ಕಾಮಗಾರಿಗಳು ಬಾಕಿ ಇರುವದು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸೇರಿ ಎಲ್ಲ ಇಲಾಖಾ ಅಧಿಕಾರಿಗಳ ಸಭೆ ನಡೆಸಿ, ಮಾಹಿತಿ ಪಡೆದು ವಿಳಂಬ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು; ಕೊಳವೆ ಬಾವಿ ಕೊರೆಯಲು ಹಾಗೂ ಮೋಟಾರ್ ಅಳವಡಿಸಲು ವಿಳಂಬ ಮಾಡುತ್ತಿರುವ ಗುತ್ತಿಗೆದಾರ ಸಂಸ್ಥೆಗಳಿಗೆ ನೋಟೀಸ್ ನೀಡುವದಲ್ಲದೆ, ಸ್ಪಂದಿಸದಿದ್ದರೆ ಗುತ್ತಿಗೆ ರದ್ದು ಮಾಡಿ ಹೊಸ ಗುತ್ತಿಗೆದಾರರಿಗೆ ನೀಡುವಂತೆ ಸೂಚಿಸಿದರು.

ಅರಣ್ಯ ಇಲಾಖೆ ಸಮಸ್ಯೆ : ಕೆಲವು ಅರಣ್ಯದಂಚಿನಲ್ಲಿರುವ ಹಾಡಿಗಳಲ್ಲಿನ ಫಲಾನುಭವಿಗಳಿಗೆ ಕೃಷಿ ಚಟುವಟಿಕೆಗಳಿಗಾಗಿ ಕೊರೆಯ ಲಾಗಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಅರಣ್ಯದೊಳಗಡೆ ವಿದ್ಯುತ್ ಮಾರ್ಗ ಕಲ್ಪಿಸಲು ಅರಣ್ಯ ಇಲಾಖೆಯ ಅಡ್ಡಿ ಇರುವದಾಗಿ ಸೆಸ್ಕ್ ಅಧಿಕಾರಿಗಳು ಸಮಸ್ಯೆ ಹೇಳಿ ಕೊಂಡರು. ಈ ಸಂದರ್ಭದಲ್ಲಿ ಕೊಳವೆ ಬಾವಿ ಕೊರೆಯಲು ಲಾರಿ ಹೋಗುವಾಗ ವಿದ್ಯುತ್ ನೀಡಲು ಏನು ಸಮಸ್ಯೆ ಎಂದು ಸಮಿತಿ ಸದಸ್ಯರು ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಸದಸ್ಯ ಸುನಿಲ್ ಸುಬ್ರಮಣಿ ಬಹಳಷ್ಟು ಹಾಡಿಗಳು ಅರಣ್ಯ ಪ್ರದೇಶದಲ್ಲಿವೆ. ಯಾವದೇ ಯೋಜನೆ, ಕಾಮಗಾರಿ ಜಾರಿಗೊಳಿಸಲು ಅರಣ್ಯ ಇಲಾಖೆ ಅಡ್ಡಿ ಮಾಡುತ್ತದೆ. ಪ್ರಶ್ನೆ ಮಾಡಿದರೆ ಸರ್ವೋಚ್ಚ

(ಮೊದಲ ಪುಟದಿಂದ) ನ್ಯಾಯಾಲಯದ ತೀರ್ಪನ್ನು ಮುಂದಿಡುತ್ತಾರೆ. ಇದರಿಂದ ಅಧಿಕಾರಿಗಳು ಹೆದರಿಕೊಳ್ಳುತ್ತಾರೆ. ಇದರಿಂದ ತೀರಾ ಸಮಸ್ಯೆಯಾಗುತ್ತಿರುವದಾಗಿ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣ ಸ್ವಾಮಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಮೋಟಾರ್ ಇಲ್ಲದೆ ಬಿಲ್

ಕೆಲವು ಹಾಡಿಗಳಲ್ಲಿ ಕೊಳವೆ ಬಾವಿಗೆ ಮೋಟಾರ್ ಅಳವಡಿಸಲು ವಿದ್ಯುತ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಲಾಗಿದೆ, ಆದರೆ, ಮೋಟಾರ್ ಅಲವಡಿಸಿಲ್ಲ. ಆದರೂ ವಿದ್ಯುತ್ ಇಲಾಖೆಯಿಂದ ಬಿಲ್ ಕಳುಹಿಸಿ, ನೋಟೀಸ್ ನೀಡಲಾಗುತ್ತಿದೆ ಎಂದು ಫಲಾನುಭವಿಗಳು ಅಹವಾಲು ಸಲ್ಲಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷರು, ವಿದ್ಯುತ್ ನೀಡದೆ ಹೇಗೆ ಬಿಲ್ ಕೇಳುತ್ತೀರಾ ಎಂದು ಸೆಸ್ಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ವಿದ್ಯುತ್ ಕಲ್ಪಿಸುವಂತೆ ನಿರ್ದೇಶನ ನೀಡಿದರು. ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಚಂದ್ರಶೇಖರ್, ವಿವಿಧ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್‌ಕುಮಾರ್, ಟಿ.ಕುಮಾರ್, ಕವಿತಾ ವಾರಂಗಲ್, ರವಿ, ನಾಸಿರ್, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಶೋಭಾ ಇನ್ನಿತರರು ಮಾಹಿತಿ ನೀಡಿದರು. ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ಬಸವರಾಜ ಪಾಟೀಲ್ ಹಿಟಗಿ, ಎಂ.ಎ. ಗೋಪಾಲಸ್ವಾಮಿ, ಪ್ರತಾಪ್ ಸಿಂಹ ನಾಯಕ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಇದ್ದರು.