ಮಡಿಕೇರಿ, ಜ. ೪: ಕೊಡವ ರೈಡರ್ಸ್ ಕ್ಲಬ್ ಸದಸ್ಯರು ನಲ್ಲೂರು ದೇವರಕಾಡಿಗೆ ಭೇಟಿ ನೀಡಿ ಕಳೆದ ಜುಲೈ ತಿಂಗಳಲ್ಲಿ ತಾವು ನೆಟ್ಟಿರುವ ಕಾಡು ಮರಗಳ ವೀಕ್ಷಣೆ - ಪೋಷಣೆ ಮಾಡುವುದರ ಮೂಲಕ ಸಂಘ ಸಂಸ್ಥೆಗಳು ಕೇವಲ ಮರಗಿಡಗಳನ್ನು ನೆಟ್ಟರೆ ಸಾಲದು ಅದನ್ನು ಪದೇಪದೇ ವೀಕ್ಷಿಸುವ ಮೂಲಕ ನೆಟ್ಟ ಗಿಡಗಳನ್ನು ಸಂರಕ್ಷಿಸಬೇಕಿದೆ ಎಂಬ ಸಂದೇಶವನ್ನು ಸಾರಿದರು.

ಪೊನ್ನಂಪೇಟೆ ಸಮೀಪದ ನಲ್ಲೂರುವಿನ ದೇವರಕಾಡುವಿನಲ್ಲಿ ಕಳೆದ ಜುಲೈ ೩೧ರಂದು ಕೊಡವ ರೈಡರ್ಸ್ ಕ್ಲಬ್, ರಾಜ್ಯ ರೈತ ಸಂಘ ಕೊಡಗು ಹಾಗೂ ಅರಣ್ಯ ಮಹಾವಿದ್ಯಾಲಯ ಮತ್ತು ನಲ್ಲೂರು ಗ್ರಾಮಸ್ಥರ ಸಹಕಾರದಲ್ಲಿ ಕಾಡು ಗಿಡಗಳು ಹಾಗೂ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬಳಿಕ ಈ ಪ್ರದೇಶಕ್ಕೆ ಎರಡು ಬಾರಿ ಭೇಟಿ ನೀಡಿದ ಕೊಡವ ರೈಡರ್ಸ್ ಕ್ಲಬ್ ತಂಡ ನೆಟ್ಟಿರುವ ಗಿಡಗಳನ್ನು ಪರಿಶೀಲಿಸಿ ಗಿಡಕ್ಕೆ ಅಪಾಯ ತಂದೊಡ್ಡುವ ಕಾಡು ಬಳ್ಳಿಗಳನ್ನು ಕಡಿದು ಸ್ವಚ್ಛಗೊಳಿಸಿ ಗಿಡಗಳ ಹಾರೈಕೆ ಮಾಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಕೊಡವ ರೈಡರ್ಸ್ ಕ್ಲಬ್ ಪ್ರಮುಖರಾದ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಹಾಗೂ ಸಣ್ಣುವಂಡ ದರ್ಶನ್ ಕಾವೇರಪ್ಪ ಗಿಡಗಳನ್ನು ನೆಟ್ಟರೆ ಸಾಲದು ಅದನ್ನು ಸಂರಕ್ಷಿಸಬೇಕಿದೆ.

ನಲ್ಲೂರು ದೇವರಕಾಡುವಿನಲ್ಲಿ ನೆಟ್ಟಿರುವ ಗಿಡಗಳ ಸಂರಕ್ಷಣೆಯನ್ನು ಒಂದು ವರ್ಷಗಳ ಕಾಲ ಮಾಡುವುದಾಗಿ ಊರಿನವರಿಗೆ ಮಾತು ಕೊಟ್ಟಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ, ಸದ್ಯದಲ್ಲಿಯೇ ಈ ಭಾಗದಲ್ಲಿ ನೆಟ್ಟಿರುವ ಗಿಡಗಳ ಸುತ್ತ ಬೆಳೆದಿರುವ ಗಿಡ ಬಳ್ಳಿಗಳನ್ನು ಸ್ವಚ್ಛ ಮಾಡುವ ಕೆಲಸ ಮಾಡಲಾಗುತ್ತದೆ. ಸಂಘ ಸಂಸ್ಥೆಗಳು ಗಿಡಗಳನ್ನು ನೆಟ್ಟರೆ ಸಾಲದು ಅದು ಯಶಸ್ವಿಯಾಗಿ ಬೆಳೆಯಬೇಕು ಎಂದರು.