ಸೋಮವಾರಪೇಟೆ, ಜ. ೪: ಜಿಲ್ಲೆಯ ಅಲ್ಲಲ್ಲಿ ನೆಲೆಯಾಗಿರುವ ಮೊಗೇರ ಸಮುದಾಯ ಬಾಂಧವರನ್ನು ಒಂದೇ ವೇದಿಕೆಯಡಿ ಸಂಘಟಿಸಿ ಸಮಾಜದ ಮುಖ್ಯವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಪ್ರಯತ್ನ ಸಾಗಿರುವ ಮಧ್ಯೆಯೇ, ಜಿಲ್ಲಾ ಮಟ್ಟದಲ್ಲಿ ಮೊಗೇರ ಸಮುದಾಯ ಭವನ ನಿರ್ಮಾಣಕ್ಕೂ ಒಗ್ಗಟ್ಟಿನ ಪ್ರಯತ್ನ ನಡೆಸಬೇಕಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅಭಿಪ್ರಾಯಿಸಿದರು.

ತಾಲೂಕು ಮೊಗೇರ ಸೇವಾ ಸಮಿತಿಯ ವತಿಯಿಂದ ಪಟ್ಟಣದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮೊಗೇರ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದೆ ಉಳಿದಿದೆ. ಸರ್ಕಾರದಿಂದ ಮೀಸಲಾತಿ, ಹಲವಷ್ಟು ಸವಲತ್ತು ಗಳಿದ್ದರೂ ಅದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನಾಂಗದ ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡಿದರೆ ಮಾತ್ರ ಸವಲತ್ತುಗಳ ಬಗ್ಗೆ ಅರಿವು ಹೊಂದಲು ಸಾಧ್ಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ನಮ್ಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಪಿ.ಕೆ. ಚಂದ್ರು ಅವರು ಆಯ್ಕೆಯಾಗಿರುವುದು ಇಡೀ ಸಮುದಾಯಕ್ಕೆ ಹೆಮ್ಮೆ ತಂದಿದೆ ಎಂದರು.

ಸಮುದಾಯದ ಮಂದಿಯನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಸಮಾಜ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಅರ್ಧಕ್ಕೆ ತಮ್ಮ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಬಾರದು. ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ರವಿ ಮಾತನಾಡಿ, ರಾಜಕೀಯ ಸ್ಥಾನಮಾನ ಲಭಿಸಿದವರು ಸಮುದಾಯವನ್ನು ನಿರ್ಲಕ್ಷಿಸದೇ, ಜನಾಂಗ ಬಾಂಧವರ ಅಭ್ಯುದಯಕ್ಕೆ ತಮ್ಮ ಕೈಲಾದ ಸೇವೆ ಸಲ್ಲಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ಸಮಿತಿ ಅಧ್ಯಕ್ಷ ದಾಮೋಧರ್ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಉಪಾಧ್ಯಕ್ಷ ರಾಮಚಂದ್ರ, ಮಾಜೀ ಅಧ್ಯಕ್ಷ ವೆಂಕಪ್ಪ, ವೀರಾಜಪೇಟೆ ತಾಲೂಕು ಸಮಿತಿ ಅಧ್ಯಕ್ಷ ವಸಂತ ಅವರುಗಳು ಉಪಸ್ಥಿತರಿದ್ದರು.