ಗೋಣಿಕೊಪ್ಪಲು, ಜ. ೪: ಅಸಮರ್ಪಕ ಕಸ ವಿಲೇವಾರಿ, ಜಲಮೂಲಕ್ಕೆ ತ್ಯಾಜ್ಯ, ಮಲೀನ ಗೊಳ್ಳುತ್ತಿರುವ ಕುಡಿಯುವ ನೀರು, ಜನನಿಬಿಡ ವಾಣಿಜ್ಯ ನಗರಿಯನ್ನು ಸ್ವಚ್ಛ ಸುಂದರಗೊಳಿಸಲು, ನಗರವನ್ನು ‘ಗ್ರೀನ್ ಗೋಣಿಕೊಪ್ಪಲ’ನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಗೋಣಿ ಕೊಪ್ಪಲು ಮಹಿಳಾ ಸಮಾಜದಲ್ಲಿ ‘ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆ’ಗೆ ಚಾಲನೆ ನೀಡಲಾಯಿತು.

ವೀರಾಜಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಹಾಗೂ ಗ್ರಾ.ಪಂ. ಅಧ್ಯಕ್ಷೆ ಚೈತ್ರ ಚೇತನ್ ಪವಿತ್ರ ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ವೇದಿಕೆಯ ಕಾರ್ಯಕ್ರಮಕ್ಕೆ ಜಂಟಿ ಚಾಲನೆ ನೀಡಿದರು. ಕಳೆದ ಹಲವು ವರ್ಷಗಳಿಂದ ಗೋಣಿ ಕೊಪ್ಪಲು ಕೀರೆಹೊಳೆ, ತೋಡು ಅತಿಕ್ರಮಣ ಗೊಂಡಿದ್ದು ತೆರವು ಸಾಧ್ಯವಾಗಿರಲಿಲ್ಲ. ಆದರೆ, ಹಲವು ಹೋರಾಟಗಾರರ ಒತ್ತಾಸೆ, ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾಡಳಿತ, ತಾಲೂಕು ಕಂದಾಯ ಇಲಾಖೆಯ ಪ್ರಾಮಾಣಿಕ ಪ್ರಯತ್ನದಿಂದಾಗಿ ತೆರವು ಕಾರ್ಯ ಆರಂಭವಾಗಿದೆ ಎಂದರು. ಇದೀಗ ತೆರವುಗೊಂಡಿರುವ ಜಲಮೂಲದ ಭಾಗದಲ್ಲಿ ತುರ್ತು ತಡೆಗೋಡೆ ಅಗತ್ಯವಿದ್ದಲ್ಲಿ ಶಾಸಕರ ಸಮಕ್ಷಮದಲ್ಲಿ ತೀರ್ಮಾನ ಕೈಗೊಂಡು ವಿವಿಧ ಇಲಾಖಾವಾರು ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸ ಲಾಗುವದು ಎಂದರು. ಗ್ರಾ.ಪಂ. ಅಧ್ಯಕ್ಷೆ ಚೈತ್ರ ಚೇತನ್ ಮಾತನಾಡಿ, ಗ್ರಾ.ಪಂ. ಮಾಡಬೇಕಾಗಿರುವ ಕೆಲಸವನ್ನು ಮಾಡಲು ನೂತನ ಹೋರಾಟ ವೇದಿಕೆ ಆರಂಭಗೊAಡಿರುವದು ಶ್ಲಾಘನೀಯ. ಇವತ್ತು ಗೋಣಿ ಕೊಪ್ಪಲು ನಗರ ವಸತಿ ಪ್ರದೇಶವಾಗಿ ಮಾರ್ಪಟ್ಟ ಹಿನ್ನೆಲೆ ಪರಿಶುದ್ಧ ಗಾಳಿ, ಕುಡಿಯುವ ನೀರಿಗೆ ಭವಿಷ್ಯದಲ್ಲಿ ಕ್ಷಾಮ ಎದುರಾಗಲಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗೂಡಿ ಸುಂದರ ಗೋಣಿಕೊಪ್ಪಲು ನಗರ ನಿರ್ಮಾಣ ಮಾಡುವ. ಶೀಘ್ರದಲ್ಲಿಯೇ ಜಲಮೂಲ ಸಂರಕ್ಷಣಾ ಹೋರಾಟ ಸಮಿತಿ, ಗ್ರಾ.ಪಂ. ಆಡಳಿತ ಸರ್ವ ಸದಸ್ಯರ ಸಭೆ ಕರೆಯಲಾಗುವದು. ಮನೆ ಮನೆ ಜಾಗೃತಿ ಇಂದಿನ ಅಗತ್ಯ ಎಂದರು. ವೈಜ್ಞಾನಿಕ ಕಸ ವಿಂಗಡಣೆಗೆ ಗೋಣಿಕೊಪ್ಪಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಲಭ್ಯವಿರುವ ಪೈಸಾರಿ ಭೂಮಿಯನ್ನು ಗುರುತಿಸಿ ವಶಕ್ಕೆ ತೆಗೆದುಕೊಳ್ಳಲಾಗುವದು ಎಂದು ಹೇಳಿದರು.

ವೇದಿಕೆಯ ಸ್ಥಾಪಕ ಕಾರ್ಯಾಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅವರು ಮಾತನಾಡಿ, ಪರಿಶುದ್ಧ ನೀರನ್ನು ನಾವು ಕುಡಿಯುವಂತಾಗಬೇಕು. ಕಾವೇರಿ ನದಿಯಿಂದ ಸುಮಾರು ೧೧ ಗ್ರಾ.ಪಂ.ಗೆ ಕುಡಿಯುವ ನೀರು ಯೋಜನೆಗೆ ರೂ. ೪೫ ಕೋಟಿ ಅನುದಾನ ಕಾವೇರಿ ನೀರಾವರಿ ನಿಗಮ ಕಲ್ಪಿಸಲು ಸಿದ್ಧವಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯೋನ್ಮುಖ ರಾಗಬೇಕಾಗಿದೆ. ಉತ್ತಮ ನೀರು, ಗಾಳಿ, ಆಹಾರ ಹಾಗೂ ಔಷಧಿಗಾಗಿ ನಾವು ಹೋರಾಟ ನಡೆಸಬೇಕಾಗಿದೆ ಎಂದು ನುಡಿದರು.

ಉಪಾಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ ಅವರು ಹೋರಾಟ ವೇದಿಕೆಯ ನೋಂದಾವಣೆ ಹಾಗೂ ಬೈಲಾ ರಚನೆ ಶೀಘ್ರ ಆಗಬೇಕಿದ್ದು ತಾವು ಸಹಕಾರ ನೀಡುವದಾಗಿ ಹೇಳಿದರು. ಯೋಜನಾ ನಿರ್ದೇಶಕಿ ಕೊಣಿಯಂಡ ಕಾವ್ಯ ಸಂಜು ಅವರು, ಇದೀಗ ತೆರವುಗೊಂಡು ಖಾಲಿಯಾಗಿರುವ ಜಲಮೂಲ ದಡದಲ್ಲಿ ಪುಷ್ಪೋದ್ಯಾನ ನಿರ್ಮಾಣ, ಹಸಿರು ಗಿಡ ಮರ ಬೆಳೆಸುವ ಮೂಲಕ ‘ಗ್ರೀನ್ ಗೋಣಿಕೊಪ್ಪಲು’ ಮಾಡುವ ಯೋಜನೆಗೆ ತಾವು ಮತ್ತು ತಮ್ಮ ತಂಡ ಸಹಕಾರ ನೀಡುತ್ತೇವೆ. ಸುಂದರ ನಗರವಾಗಿಸುವ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗೂಡಿ ಕೆಲಸ ಮಾಡುವ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ನೂತನ ಅಧ್ಯಕ್ಷ ಪುಳಿಂಜನ ಟಿ. ಪೂವಯ್ಯ ಅವರು ಹೋರಾಟಕ್ಕೆ ಎಲ್ಲರ ಸಹಕಾರ ಕೋರಿದರು. ಉಪಾಧ್ಯಕ್ಷೆ ಪಡಿಕಲ್ ಕುಸುಮಾವತಿ, ಯೋಜನಾ ನಿರ್ದೇಶಕ ತುಷಾರ್ ಕುಲಕರ್ಣಿ, ನಿರ್ದೇಶಕ ನಾಮೇರ ದೇವಯ್ಯ, ಖಜಾಂಚಿ ಸಲ್ಮಾ ಎಸ್.ಎನ್., ಗೌರವ ಸಲಹೆಗಾರ ಜೆ. ಸೋಮಣ್ಣ, ಪ್ರಧಾನ ಕಾರ್ಯದರ್ಶಿ ನಾರಾಯಣ ಸ್ವಾಮಿ ನಾಯ್ಡು, ಶಕುಂತಲ ಮುಂತಾದವರು ಮಾತನಾಡಿದರು. ಮಾಧ್ಯಮ ವಕ್ತಾರ ಟಿ.ಎಲ್. ಶ್ರೀನಿವಾಸ್, ಹಂತ ಹಂತವಾಗಿ ಗೋಣಿಕೊಪ್ಪಲು ಎಲ್ಲ ವಾರ್ಡ್ಗಳನ್ನು ಸ್ವಚ್ಛಗೊಳಿಸಲು, ಪ್ಲ್ಲಾಸ್ಟಿಕ್ ಮುಕ್ತ ಮಾಡಲು. ತೋಡು, ಕೀರೆಹೊಳೆ ತ್ಯಾಜ್ಯವನ್ನು ಹೊರ ತೆಗೆಯಲು ಕಾರ್ಯಯೋಜನೆ ಹಾಕಿ ಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಕಾಡ್ಯಮಾಡ ಪೆಮ್ಮಯ್ಯ, ರಾಮಯ್ಯ, ಪಂಚಮಿ ಇತರರು ಉಪಸ್ಥಿತರಿದ್ದರು.