ಕುಶಾಲನಗರ, ಜ. ೪: ಕರ್ನಾಟಕ ಗಿರಿಜನ ಸುರಕ್ಷಾ ವೇದಿಕೆಯ ಜಿಲ್ಲಾ ಸಮ್ಮೇಳನ ತಾ. ೧೧ ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು ವೇದಿಕೆಯ ಪ್ರಾಂತ್ಯ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶ್ರೀನಿವಾಸ್, ಗಿರಿಜನರ ಹಲವು ಬೇಡಿಕೆಗಳನ್ನು ಮುಂದಿಟ್ಟು ಈ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಆ ಮೂಲಕ ಗಿರಿಜನರ ಯೋಜನೆಗಳನ್ನು ಮತ್ತು ತಮ್ಮ ವೇದಿಕೆಯ ಬೇಡಿಕೆಗಳನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ಹೇಳಿದರು.

ಅರಣ್ಯ ಹಕ್ಕು ಕಾಯ್ದೆ ತಕ್ಷಣ ಅನುಷ್ಠಾನಗೊಳಿಸುವುದು, ಅಪೂರ್ಣವಾಗಿರುವ ಗಿರಿಜನ ಯೋಜನೆಗಳನ್ನು ಪೂರ್ಣಗೊಳಿಸುವುದು, ಪ್ರತಿಯೊಂದು ಗಿರಿಜನ ಕುಟುಂಬಕ್ಕೆ ಮೂರು ಎಕರೆ ಜಾಗವನ್ನು ನೀಡುವುದು. ಮತಾಂತರ ಹೊಂದಿದ ಎಸ್.ಟಿ ವ್ಯಕ್ತಿಗಳಿಗೆ ಸಂವಿಧಾನಬದ್ಧವಾದ ಸೌಲಭ್ಯವನ್ನು ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಅವರು ತಿಳಿಸಿದರು.

ಜಿಲ್ಲಾಧ್ಯಕ್ಷ ಪ್ರಕಾಶ್ ಅವರು ಮಾತನಾಡಿ, ೨೦೦೮ರಲ್ಲಿ ಸರ್ಕಾರ ಅರಣ್ಯ ಹಕ್ಕು ಕಾಯ್ದೆಯನ್ನು ತಂದರೂ ಅದು ಇನ್ನೂ ಅನುಷ್ಠಾನ ಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ತಕ್ಷಣ ಎಲ್ಲ ಫಲಾನುಭವಿಗಳಿಗೆ ಯೋಜನೆಯ ಸದುಪಯೋಗ ಆಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಸಮ್ಮೇಳನ ಸಂಯೋಜಕ ಮತ್ತು ತಾಲೂಕು ಕಾರ್ಯದರ್ಶಿ ಆಗಿರುವ ಭರತ್ ಮಾಚಯ್ಯ ಅವರು ಮಾತನಾಡಿ ತಾ. ೧೧ ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಲಿರುವ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭ ವೇದಿಕೆಯ ಪ್ರಮುಖರಾದ ಮುತ್ತಮ್ಮ, ಹರೀಶ್, ಸಿದ್ದಣ್ಣ , ಬಿ.ಕೆ. ಮೋಹನ್, ಸದಸ್ಯರಾದ ಉಮಾ ಮತ್ತಿತರರು ಇದ್ದರು.