ಕುಶಾಲನಗರ, ಜ. ೨ : ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಭವನ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಹೇಳಿದರು.
ರೈತ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,
ಮಡಿಕೇರಿಯಲ್ಲಿ ಜಾಗ ಖರೀದಿಸಿ ಒಕ್ಕಲಿಗರ ಭವನ ಮಾಡಲು ಸದಸ್ಯರು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಹೊಸದಾಗಿ ಎರಡು ತಾಲೂಕುಗಳು ರಚನೆಗೊಂಡಿದ್ದು, ಒಕ್ಕಲಿಗರ ತಾಲೂಕು ಸಂಘವನ್ನು ಕೂಡಲೇ ರಚನೆ ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಹಕಾರ ಸಂಘದ ನಿರ್ದೇಶಕರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಹಿಂದಿನ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದುಕೊಂಡರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಬಿ.ಎ. ಜೀವಿಜಯ, ಎಸ್.ಜಿ. ಮೇದಪ್ಪ, ಪಿ.ಕೆ. ರವಿ, ವಿ.ಕೆ. ದೇವಲಿಂಗಯ್ಯ, ವಿ.ಪಿ. ಸುರೇಶ್, ಕೆ.ಎಂ. ಲೋಕೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಕೆ.ಪಿ. ನಾಗರಾಜು, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎ.ಆರ್. ಮುತ್ತಣ್ಣ, ಕುಶಾಲನಗರ ಅಧ್ಯಕ್ಷ ಎಂ.ಕೆ. ದಿನೇಶ್ ಮುಖಂಡರಾದ ವಿ.ಪಿ. ಶಶಿಧರ್, ತಾಕೇರಿ ಪೊನ್ನಪ್ಪ, ವಾಲ್ನೂರು ಭುವನೇಂದ್ರ ಮತ್ತಿತರ ಪ್ರಮುಖರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.