ಸೋಮವಾರಪೇಟೆ, ಜ. ೨: ಹಿಂದೂ ಜಾಗರಣಾ ವೇದಿಕೆ ಮತ್ತು ಹಿಂದೂ ಯುವ ವಾಹಿನಿ ಆಶ್ರಯದಲ್ಲಿ ನಡೆಯುತ್ತಿರುವ ಯೋಧ ನಮನ ರಥಯಾತ್ರೆ ಸೋಮವಾರಪೇಟೆ ಪಟ್ಟಣಕ್ಕೆ ಆಗಮಿಸಿದ ಸಂದರ್ಭ ನೂರಾರು ಮಂದಿ ದೇಶಾಭಿಮಾನಿಗಳು ಸ್ವಾಗತಿಸಿ, ಬಿಪಿನ್ ರಾವತ್ ಸೇರಿದಂತೆ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಯೋಧರಿಗೆ ಪುಷ್ಪನಮನ ಸಲ್ಲಿಸಿದರು.

ತಾಲೂಕಿನ ಬೇಳೂರು, ಹಾನಗಲ್ಲು, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಂಚರಿಸಿದ ರಥವು ಸಂಜೆ ವೇಳೆಗೆ ಸೋಮವಾರಪೇಟೆ ಪಟ್ಟಣಕ್ಕೆ ಆಗಮಿಸಿದ ಸಂದರ್ಭ ವಿವೇಕಾನಂದ ವೃತ್ತದಲ್ಲಿ ಮಾಲಾರ್ಪಣೆ ಮಾಡಲಾಯಿತು.

ನಂತರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುಂಟಿಕೊಪ್ಪದ ಬಾಲಕಿ ಶ್ರೀಶಾ, ಬಿಪಿನ್ ರಾವತ್ ಅವರು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡುವ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದರು. ಆದರೆ ದುರಂತದಲ್ಲಿ ಅವರೂ ಸೇರಿದಂತೆ ಪತ್ನಿ, ಇತರ ಅಧಿಕಾರಿಗಳು ಮೃತಪಟ್ಟಿರುವುದು ವಿಷಾದಕರ ಎಂದಳು.

ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಮುಖಂಡರಾದ ಸುಭಾಷ್ ತಿಮ್ಮಯ್ಯ, ಮಾದಾಪುರ ಸುನಿಲ್, ಎಂ.ಬಿ. ಉಮೇಶ್, ಬೋಜೇಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯ ಬಿ.ಆರ್.ಮಹೇಶ್, ಶುಭಕರ್, ಮೃತ್ಯುಂಜಯ, ಜಿ.ಪಂ. ಮಾಜಿ ಸದಸ್ಯೆ ಪೂರ್ಣಿಮಾ ಗೋಪಾಲ್, ಚೌಡ್ಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ, ಬಿ.ಜೆ.ಪಿ. ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಜೈ ಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೇರಿದಂತೆ ಸದಸ್ಯರುಗಳು, ಆಟೋ ಹಾಗೂ ಮೋಟಾರ್ ಯೂನಿಯನ್ ಸದಸ್ಯರು, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದು, ಪುಷ್ಪ ನಮನ ಸಲ್ಲಿಸಿದರು.