*ಗೋಣಿಕೊಪ್ಪ, ಜ. ೨: ಎನ್.ಸಿ.ಸಿ ತರಬೇತಿಯಲ್ಲಿ ಪಾಲ್ಗೊಂಡು ಸೇನೆಯ ಶಿಸ್ತು ಬದ್ಧತೆಯನ್ನು ತಿಳಿದುಕೊಳ್ಳುವ ವಿದ್ಯಾರ್ಥಿಗಳು ಸೇನೆಗೆ ಸೇರಲು ಆಸಕ್ತರಾಗಿ ದೇಶ ಸೇವೆ ಸಲ್ಲಿಸಬೇಕು ಎಂದು ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಬಿ.ಕಾವೇರಪ್ಪ ಕೆಡೆಟ್‌ಗಳಿಗೆ ಕರೆ ನೀಡಿದರು.
ಗೋಣಿಕೊಪ್ಪ ಕಾವೇರಿ ಕಾಲೇಜಿನ ಆವರಣದಲ್ಲಿ ಏಳು ದಿನಗಳಿಂದ ನಡೆದ ಎನ್.ಸಿ.ಸಿ ಘಟಕದ ಕೇಡರ್ ಕ್ಯಾಂಪ್‌ನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ವ್ಯಕ್ತಿತ್ವ ವಿಕಸನ, ಬಂದೂಕು ತರಬೇತಿ ಮತ್ತು ಅವುಗಳ ವಿಶೇಷತೆ, ಮ್ಯಾಪ್ ರೀಡಿಂಗ್, ಕಂಪಾಸ್, ಡ್ರಿಲ್ ಇವುಗಳ ಬಗ್ಗೆ ಪಡೆದ ತರಬೇತಿ ಮುಂದಿನ ದಿನಗಳಲ್ಲಿ ಪ್ರಯೋಜವಾಗುತ್ತದೆ. ಮುಂದೆ ನಡೆಯುವಂತಹ ಬಿ ಮತ್ತು ಸಿ ಪ್ರಮಾಣ ಪತ್ರದ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಬೇಕು ಎಂದು ಹೇಳಿದರು.
ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ಶಿಸ್ತು ಬದ್ಧ ಜೀವನ ಶೈಲಿ, ವ್ಯಕ್ತಿತ್ವ ವಿಕಸನಗೊಳ್ಳಬೇಕಾದರೆ ಅದು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ತರಬೇತಿಗಳ ಮೂಲಕ ಸಾಧ್ಯ. ಆ ತರಬೇತಿಯನ್ನು ಎನ್.ಸಿ.ಸಿ ಘಟಕದ ಮೂಲಕ ನೆರವೇರಿಸಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಹವಾಲ್ದಾರ್ ರಾಜು ಗೌರವ್, ವಿಕಾಸ್ ತಾಪ, ಘಟಕದ ಅಧಿಕಾರಿಗಳಾದ ಲೆಫ್ಟಿನೆಂಟ್ ಅಕ್ರಂ, ಲೆಫ್ಟಿನೆಂಟ್ ಕಾವೇರಪ್ಪ, ಕಾಲೇಜಿನ ಅಧೀಕ್ಷಕರಾದ ಸೋಮನಾಥ್ ಪಾಲ್ಗೊಂಡಿದ್ದರು.