ಗೋಣಿಕೊಪ್ಪ, ಡಿ. ೨೯: ವ್ಯಾಪಾರಿಗಳು ನಿತ್ಯ ಬೆಳೆ ದರಪಟ್ಟಿ ಯನ್ನು ಕಡ್ಡಾಯವಾಗಿ ವ್ಯಾಪಾರ ಕೇಂದ್ರದಲ್ಲಿ ಪ್ರಕಟಪಡಿಸುವ ನಿಯಮ ಜಾರಿಗೆ ಜಿಲ್ಲಾಡಳಿತವನ್ನು ಒತ್ತಾಯಿಸುವ ನಿರ್ಣಯವನ್ನು ಬುಧವಾರ ಭರಣಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮೂಹಿಕ ರೈತ ಸಂಘ, ಹಸಿರು ಸೇನೆಯ ರೈತ ಕಾರ್ಯಕ್ರಮದಲ್ಲಿ ತೆಗೆದು ಕೊಳ್ಳಲಾಯಿತು.
ವ್ಯಾಪಾರಿಗಳು ಮನಸೋಇಚ್ಛೆ ದರ ನಿಗದಿ ಮಾಡಿಕೊಂಡು ಕಾಫಿ, ಭತ್ತ, ಅಡಿಕೆ ವ್ಯಾಪಾರದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇದರಿಂದಾಗಿ ಕಡ್ಡಾಯವಾಗಿ ಅಂಗಡಿ ಎದುರು ದರಪಟ್ಟಿ ಹಾಕಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಬೆಂಬಲ ಬೆಲೆಯಲ್ಲಿ ಖರೀದಿಸುವ ಭತ್ತದ ಪ್ರಮಾಣವನ್ನು ಗರಿಷ್ಠ ೪೦ ಕ್ವಿಂಟಾಲ್ ನಿಯಮದಿಂದ ಮುಕ್ತಗೊಳಿಸಬೇಕು, ೧೦ ಎಚ್. ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್, ಕೊಡಗಿನಲ್ಲಿ ಜನವರಿಯಿಂದ ೩ ತಿಂಗಳು ಅನಿಯಮಿತ ವಿದ್ಯುತ್ ಸರಬರಾಜು, ಮನೆ ನಿರ್ಮಾಣಕ್ಕೆ ಮರ ಬಳಸಲು ೩೦೦ ಘನಅಡಿ ಪ್ರಮಾಣಕ್ಕೆ ವಿಸ್ತರಿಸುವುದು, ಕಲ್ಲು, ಮರಳು ಸಾಗಿಸಲು ರೈತರಿಗೆ ಅವಕಾಶ ಮಾಡಿ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
ಜಿಲ್ಲೆಯಲ್ಲಿ ಸಂಘಟನೆ ಮೂಲಕ ರೈತಪರ ಹೋರಾಟ ನಡೆಸಲು ಸಮಿತಿ ಪುನರಚಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಪ್ರಗತಿ ಪರ ರೈತ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರನ್ನು ಸನ್ಮಾನಿಸಿಸಲಾ ಯಿತು. ವರಿಷ್ಠ ಕೆ.ಟಿ. ಗಂಗಾಧರ್ ಸದಸ್ಯರಿಗೆ ಹಸಿರು ದೀಕ್ಷಾ ವಚನ ಬೋಧಿಸಿದರು. ಸಂಘದ ಮೇಲಿನ ಗೌರವ, ಶಾಲು ಸಂರಕ್ಷಣೆ, ಹೋರಾಟದಲ್ಲೂ ಗೌರವ ಉಳಿಸಿಕೊಳ್ಳುವ ವಚನ ಸ್ವೀಕರಿಸಿದರು.
ಜಿಲ್ಲಾ ಮಟ್ಟದಲ್ಲಿ ಸಂಘಟನೆ ಬಲ ಪಡಿಸಲು ಸಂಚಲನ ಸಮಿತಿ ರಚಿಸಲಾಯಿತು. ಸದಸ್ಯರಾಗಿ ಕಳ್ಳಿಚಂಡ ಧನು, ಚೆಪ್ಪುಡೀರ ಕಾರ್ಯಪ್ಪ, ಚಂಗುಲAಡ ರಾಜಪ್ಪ, ಚೆಪ್ಪುಡೀರ ಸುಮತಿ, ರಾಜ್ಯ ಸಂಚಲನಾ ಸಮಿತಿಗೆ ಕಳ್ಳಿಚಂಡ ರೇಖಾ, ಚೆಪ್ಪುಡೀರ ಮಹೇಶ್, ಬಾಡಗ ಸಂಚಾಲಕರಾಗಿ ಕಳ್ಳಿಚಂಡ ನಟು ಅವರನ್ನು ಆಯ್ಕೆ ಮಾಡಲಾಯಿತು.
ರೈತ ಸಂಘ ಸ್ಥಾಪನೆಯ ಮೊದಲನೆ ತಲೆಮಾರಿನ ಹಿರಿಯರಾದ ೯೧ ವಯಸ್ಸಿನ ಸುರೇಶ್ ಬಾಬು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚೈತನ್ಯ ಮೂಡಿಸಿದರು. ರೈತರಲ್ಲಿರುವ ಎಲ್ಲಾ ಬಣಗಳು ಸೇರಿ ಮಹಾಬಣವಾಗ ಬೇಕು. ಇದು ನಮ್ಮ ಕನಸ್ಸು. ಇದರಿಂದಾಗಿ ಸಾಮೂಹಿಕ ರೈತ ಸಂಘ ಸ್ಥಾಪಿಸಲಾಗಿದೆ. ಒಂದಾಗಿ ಹೋರಾಟದ ಮೂಲಕ ರೈತರ ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂದು ಸುರೇಶ್ ಬಾಬು ಕರೆ ನೀಡಿದರು.
ರೈತ ಸಂಘದ ವರಿಷ್ಠ ಚುಕ್ಕಿ ನಂಜುAಡಸ್ವಾಮಿ ಮಾತನಾಡಿ, ಜಾಗತಿಕವಾಗಿ ಬೆಳೆ ನಿಗದಿಯಾಗುತ್ತಿರು ವುದರಿಂದ ಜಿಲ್ಲೆಯ ರೈತರು ಕಾಫಿಗೆ ಉತ್ತಮ ಬೆಲೆ ಪಡೆಯಲು ಆಗುತ್ತಿಲ್ಲ. ಮಾರುಕಟ್ಟೆ ವ್ಯವಸ್ಥೆ ಸರಿಪಡಿಸಲು ಹೋರಾಕ್ಕೆ ಮುಂದಾಗಬೇಕಿದೆ. ಉತ್ಪಾದನಾ ವೆಚ್ಚ ರೈತರಿಗೆ ನುಂಗಲಾಗದ ತುತ್ತಾಗಿದೆ. ಇದಕ್ಕೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದರು. ಸಂಘಟನೆ ಬಲಪಡಿಸಲು ತರಬೇತಿ ಶಿಬಿರ ಆಯೋಜಿಸಲು ಮುಂದಾಗಿದ್ದೇವೆ. ವಿಕೇಂದ್ರೀಕರಣಕ್ಕೆ ಹೋರಾಟದ ಸಿದ್ಧಾಂತ ಬೇಕಿದೆ. ಮಹಿಳೆಯರನ್ನು ಸೇರಿಸಿಕೊಂಡು ಮುಂದುವರಿಯಲು ಸಲಹೆ ನೀಡಿದರು.
ವರಿಷ್ಠ ಕೆ.ಟಿ. ಗಂಗಾಧರ್ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಅನುದಾನ ಪಡೆಯಲು ಜಿಲ್ಲೆಯ ರೈತರು ವಿಫಲವಾಗುತ್ತಿರುವುದು ವಿಪರ್ಯಾಸವಾಗಿದೆ. ಜನಪ್ರತಿನಿಧಿ ಗಳು, ಅಧಿಕಾರಿಗಳು ರೈತಪರ ನಿಲುವು ಹೊಂದಬೇಕು. ಹೋರಾಟದಿಂದ ಸವಲತ್ತು ಪಡೆಯುವಂತಾಗಬೇಕಿದೆ. ಕಡ್ಡಾಯವಾಗಿ ಭತ್ತ ಬೆಳೆಯುವುದು, ಕೆರೆಯಲ್ಲಿ ಮೀನು ಸಾಕಣೆಗೆ ಇಲಾಖೆಗಳ ಮಟ್ಟದಲ್ಲಿ ಅನುಷ್ಠಾನ ಗೊಳಿಸಲು ಮುಂದಾಗುವುದಾಗಿ ಭರವಸೆ ನೀಡಿದರು.
ಸಂಘದ ರಾಜ್ಯ ಮಧ್ಯಮ ಕಾರ್ಯದರ್ಶಿ ಮಂಜುಕಿರಣ್ ಮಾತನಾಡಿ, ಸಮಸ್ಯೆ-ಸಂಘಟನೆ-ಸAಘರ್ಷ ಒಟ್ಟಾಗಿ ಸಾಗುವುದರಿಂದ ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ. ರೈತರು ಹಾಗೂ ರೈತರ ವಿರುದ್ದದ ಕಾನೂನು ವಿರುದ್ದ ಹೋರಾಟಕ್ಕೆ ಮುಂದಾಗಬೇಕು ಎಂದರು. ಸಂಘದ ಮೈಸೂರು ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಸಂಘದ ಗೌರವ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಇದ್ದರು.
-ಸುದ್ದಿಪುತ್ರ, ಹೆಚ್.ಕೆ. ಜಗದೀಶ್