ವೀರಾಜಪೇಟೆ, ೨೯: ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾ.ಪಂ.ಯ ಗ್ರಾಮಸಭೆ ಇಂದು ಬೇಟೋಳಿಯ ವಿ.ಎಸ್.ಎಸ್. ಎನ್ ಸಭಾಂಗಣದಲ್ಲಿ ನಡೆಯಿತು.

ಬೇಟೋಳಿ ಗ್ರಾ.ಪಂ. ವ್ಯಾಪ್ತಿಗೆ ಮಾಕುಟ್ಟ ರಸ್ತೆಯ ಸರಹದ್ದು ಸೇರುವುದರಿಂದ ಗ್ರಾಮಪಂಚಾಯತ್ ಸದಸ್ಯ ವಸಂತ ಕಟ್ಟಿ ಮಾಕುಟ್ಟ ಪೊಲೀಸರ ಕುರಿತು ಕೇರಳದಿಂದ ಬರುತ್ತಿರುವ ಜನರಿಗೆ ಆರ್.ಟಿ.ಪಿ. ಸಿ.ಆರ್. ಕಡ್ಡಾಯ ಮಾಡಿದ್ದರೂ ಸರಿಯಾಗಿ ತಪಾಸಣೆ ಮಾಡುತ್ತಿಲ್ಲ ಎಂದು ದೂರಿದರು.

ಇತ್ತೀಚೆಗೆ ಬೇಟೋಳಿ ಗ್ರಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಚೆಕ್ ಪೋಸ್ಟ್ಗೆ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ ವಾಸ್ತವಂಶ ಅರಿಯುವ ಯತ್ನ ಮಾಡಿದಾಗ ಅಲ್ಲಿ ಶೇ. ೫೦ ರಷ್ಟು ಆರ್‌ಟಿಪಿಸಿಆರ್ ಸರ್ಟಿಫೀಕೇಟ್‌ಗಳು ನಕಲಿಯಾಗಿದ್ದವು ಮತ್ತು ಹಣ ಪಡೆದು ಪೊಲೀಸರು ನಮ್ಮನ್ನು ಬಿಟ್ಟರು ಎಂದು ಜನರು ಆರೋಪ ಮಾಡಿದ್ದಾರೆ. ಈ ರೀತಿ ಯಾದರೆ ನಮ್ಮ ಜನರ ಗತಿಯೇನಾಗ ಬೇಕು. ಪೊಲೀಸರನ್ನು ಕೇಳಿದರೆ, ಆರೋಗ್ಯ ಇಲಾಖೆಯ ಮೇಲೆ ಆರೋಪ ಮಾಡುತ್ತಾರೆ. ಆರೋಗ್ಯ ಇಲಾಖೆಯವರು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು. ಇದಕ್ಕೆ ಉತ್ತರಿಸಿದ ಪೊಲೀಸ್ ಇಲಾಖೆಯ ಅಧಿಕಾರಿ, ನಾವೇನು ಮಾಡುವುದು ನಾವೂ ಮೂವರು ಸಿಬ್ಬಂದಿಗಳು ಇರುತ್ತೇವೆ. ಹೆಚ್ಚಿನವರು ಸರ್ಟಿಫಿಕೇಟ್ ಕೇಳಿದ ಕೂಡಲೇ ನಮ್ಮ ಮೇಲೆ ಜಗಳಕ್ಕೆ ಬರುತ್ತಾರೆ ಎಂದು ಅಸಹಾಯಕತೆ ತೋಡಿಕೊಂಡರು.

ಗ್ರಾಮಸ್ಥ ಹರೀಶ್, ಇನ್ನಿತರರು ಗ್ರಾಮದಲ್ಲಿ ೧೮ ಮಂದಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದು, ಇದಕ್ಕೆ ಪರೋಕ್ಷವಾಗಿ ಖಾಸಗಿ ವ್ಯಕ್ತಿಯೊಬ್ಬರು ನಡೆಸುತ್ತಿರುವ ಗಣಿಗಾರಿಕೆಯೇ ಕಾರಣವಾಗಿದೆ. ಅಲ್ಲದೇ ಇನ್ನೂ ನಾಲ್ವರು ಸಾಯುವ ಸ್ಥಿತಿಯಲ್ಲಿದ್ದು ಪಂಚಾಯಿತಿಗೆ ಈ ಬಗ್ಗೆ ದೂರು ಕೊಟ್ಟಿದ್ದರೂ ಪಂಚಾಯಿತಿ ಈ ವಿಚಾರದಲ್ಲಿ ಏನು ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದರು. ಗ್ರಾ.ಪಂ. ಅಧ್ಯಕ್ಷೆ ಯಶೋಧಾ ಅವರು ಹೆಗ್ಗಳ ಗ್ರಾಮದಲ್ಲಿ ಮಾತ್ರ ಕ್ಯಾನ್ಸರ್ ಇದೆಯಾ? ಬೇರೆ ಎಲ್ಲಿಯೂ ಕ್ಯಾನ್ಸರ್ ಇಲ್ಲವಾ ಎಂದು ಮರುಪ್ರಶ್ನೆ ಮಾಡಿದರು. ಗ್ರಾಮಸ್ಥರು, ಅಧ್ಯಕ್ಷೆಯ ಉತ್ತರದಿಂದ ಅಸಮಾಧಾನ ಗೊಂಡರು. ಮಧ್ಯಪ್ರವೇಶ ಮಾಡಿದ ಪಿಡಿಒ ಮಣಿ ಈ ವಿಚಾರವನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗಮನಕ್ಕೆ ತಂದಿದ್ದೇವೆ. ಗಣಿ ಮತ್ತು ಭೂ ಇಲಾಖೆಯವರು ಇಲ್ಲಿ ಗಣಿಗಾರಿಕೆ ನಡೆಸಬಾರದು ಎಂದು ಗಣಿಗಾರಿಕೆ ನಿಲ್ಲಿಸಿದ್ದಾರೆ. ತಹಶೀಲ್ದಾರ್ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ; ಅದರ ವರದಿ ಬಂದ ನಂತರ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ರೈತರಿಗೆ, ಬೆಳೆಗಾರರಿಗೆ ಸಿಗುವ ಸೌಲಭ್ಯಗಳ ಕುರಿತು ಸಂಬAಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ರಸ್ತೆ ಬದಿಯಲ್ಲಿ ಮರಕಡಿಯದೆ ಇರುವುದಕ್ಕೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಚೆಸ್ಕಾಂ ಸಹಾಯಕ ಅಭಿಯಂತರರಿಗೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ಲೈನ್‌ಗಳಿಗೆ ಸಂಬAಧಪಟ್ಟ ಬಹಳಷ್ಟು ದೂರುಗಳು ಗ್ರಾಮಸ್ಥರಿಂದ ಬಂದವು. ನೋಡಲ್ ಅಧಿಕಾರಿಯಾಗಿ ಪ್ರಬಾರ ದೈಹಿಕ ಶಿಕ್ಷಕಿ ಗಾಯಿತ್ರಿ ಭಾಗವಹಿಸಿದ್ದರು.