ಶ್ರೀಮಂಗಲ, ಡಿ. ೨೮ : ಶ್ರೀಮಂಗಲ ಸಮೀಪ ನಾಲ್ಕೇರಿ ಗ್ರಾಮದಲ್ಲಿ ಬೆಳೆಗಾರರೋರ್ವರ ಮನೆಗೆ ಹಾಡಹಗಲೇ ನುಗ್ಗಿ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಬೆಳೆಗಾರನ ಸಮಯ ಪ್ರಜ್ಞೆಯಿಂದ ಮತ್ತು ಪ್ರತಿರೋಧದಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಸಂದರ್ಭ ಬೆಳೆಗಾರನ ಕೈಗೆ ಚಾಕುವಿನಿಂದ ಇರಿದು ದರೋಡೆ ಕೋರ ಪರಾರಿಯಾಗಿದ್ದಾನೆ.

ನಾಲ್ಕೇರಿ ಗ್ರಾಮದ ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಅವರು ಪತ್ನಿಯೊಂದಿಗೆ ಮನೆಯಲ್ಲಿದ್ದಾಗ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಬಾಗಿಲನ್ನು ನೂಕಿಕೊಂಡು ಒಳನುಗ್ಗಿದ ಮಾಸ್ಕ್ ಹಾಕಿಕೊಂಡಿದ್ದ ಅಪರಿಚಿತ ವ್ಯಕ್ತಿಯನ್ನು ಕಂಡು ಪತ್ನಿ ಒಳಕೋಣೆಯಲ್ಲಿದ್ದ ಗೋಪಾಲ್ ತಿಮ್ಮಯ್ಯ ಅವರನ್ನು ಕೂಗಿದಾಗ, ಅಪರಿಚಿತ ಮನೆಯ ಮತ್ತೊಂದು ಕೋಣೆಗೆ ನುಗ್ಗಿ ಚಾಕು ತೋರಿಸಿ ಹಲ್ಲೆಗೆ ಮುಂದಾಗಿದ್ದಾನೆ.

ಅಲ್ಲಿಯೇ ಇದ್ದ ಕೋಲಿನಿಂದ ಅಪರಿಚಿತ ವ್ಯಕ್ತಿಯನ್ನು ಮನೆಯಿಂದ ಹೊರಹಾಕಲು ಗೋಪಾಲ್ ತಿಮ್ಮಯ್ಯ ಅಪರಿಚಿತನೊಂದಿಗೆ ಕಾದಾಟ ನಡೆಸಿದಾಗ ತನ್ನ ಬಳಿ ಇದ್ದ ಬಾಳೆ ಕತ್ತರಿಸುವಂತಹ ಚಾಕುವಿನಿಂದ ಕೊರಳಿನ ಭಾಗಕ್ಕೆ

(ಮೊದಲ ಪುಟದಿಂದ) ಇರಿಯಲು ಮುಂದಾದಾಗ ಅದನ್ನು ತಡೆದ ಗೋಪಾಲ್ ತಿಮ್ಮಯ್ಯ ಅವರ ಎಡ ಕೈಯ ಎರಡು ಭಾಗಕ್ಕೆ ಗಾಯವಾಗಿದೆ. ಗಾಯವಾಗಿಯೂ ಅಪರಿಚಿತನನ್ನು ಹೊರಹಾಕಲು ಕೋಲಿನಿಂದ ಪ್ರಹಾರ ಮುಂದುವರೆಸಿದಾಗ ದರೋಡೆಗಾರ ಮನೆಯಿಂದ ಓಡಿಹೋಗಿದ್ದಾನೆ.

ಕೂಡಲೇ ಗ್ರಾಮದಲ್ಲಿರುವ ತನ್ನ ಸಹೋದರನ ಪುತ್ರ ಸೇನಾಧಿಕಾರಿ ಕರ್ನಲ್ ಡಾ. ದಿಲನ್ ಭೀಮಯ್ಯ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅವರಿಂದ ಪ್ರಥಮ ಚಿಕಿತ್ಸೆ ಪಡೆದು ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕಳೆದ ವರ್ಷ ಇದೇ ರೀತಿ ಅಪರಿಚಿತ ವ್ಯಕ್ತಿ ಮನೆಗೆ ಬಂದಿದ್ದರು ಎಂದು ಗೋಪಾಲ್ ತಿಮ್ಮಯ್ಯ ಅವರ ಪತ್ನಿ ತಿಳಿಸಿದ್ದಾರೆ. ಕಳೆದ ವರ್ಷ ಮನೆಯ ಎದುರಿನ ಬಾಗಿಲಿನಲ್ಲಿ ನಿಂತು ಬೆಲ್ ಮಾಡಿದ್ದರು, ಬಾಗಿಲು ಲಾಕ್ ಮಾಡಿದ್ದರಿಂದ ಕಿಟಕಿ ಮೂಲಕ ವಿಚಾರಿಸಿದಾಗ ಮಾತನಾಡದೆ ವ್ಯಕ್ತಿ ತೋಟದೊಳಗೆ ಪರಾರಿಯಾಗಿದ್ದ, ಇದೇ ವ್ಯಕ್ತಿ ಇಂದು ಬಂದವನು ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ಡಿ.ವೈ.ಎಸ್. ಪಿ.ಜಯಕುಮಾರ್ ಆಗಮಿಸಿ ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ. ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.