ಮಡಿಕೇರಿ, ಡಿ. ೨೭; ಸಮಾಜದ ಕಟ್ಟ ಕಡೆಯ ಪ್ರಜೆಗೂ ತಲೆಗೊಂದು ಸೂರು., ಕುಡಿಯಲು ನೀರು ಒದಗಿಸಬೇಕೆಂಬದು ಸರಕಾರದ ಧ್ಯೇಯ., ಆದರೆ., ಕಾಣದ ಕೈಗಳ ಕೈವಾಡಗಳಿಂದಾಗಿ ಇಲ್ಲೊಂದು ನತದೃಷ್ಟ ಕುಟುಂಬ ಸೂರಿಗಾಗಿ ದಶಕಗಳಿಂದ ಅಲೆದಾಡುತ್ತಾ., ಬಸವಳಿದು ದಿನ ದೂಡುತ್ತಿರುವ ಚಿತ್ರಣ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಕೇವಲ ಮೂರು ಸೆಂಟ್ ನಿವೇಶನಕ್ಕಾಗಿ ಇಲ್ಲೊಂದು ಬಡ ಕುಟುಂಬ ಹತ್ತೊಂಭತ್ತು ವರ್ಷಗಳಿಂದ ಕಚೇರಿ ಯಿಂದ ಕಚೇರಿಗೆ ಅಲೆದಾಡುತ್ತಿದೆ..!

ಶಿಕ್ಷಣ ಇಲಾಖೆಯಲ್ಲಿ ಡಿ ದರ್ಜೆ ನೌಕರರಾಗಿ ಕೆಲಸ ಮಾಡುತ್ತಾ, ಮನೆಯ ಜವಾಬ್ದಾರಿ ನಿರ್ವಹಿಸುತ್ತಾ, ತನ್ನ ಎರಡು ವಿಶೇಷ ಚೇತನ ಮಕ್ಕಳನ್ನು ಸಲಹುತ್ತಾ ಬದುಕು ಸವೆಸುತ್ತಿರುವ ೫೭ ವರ್ಷ ಪ್ರಾಯದ ಕೆ.ಜೆ.ಕಮಲಾಕ್ಷಿ ತನ್ನ ಕುಟುಂಬ ಕ್ಕೊಂದು ಸೂರಿಗಾಗಿ ಅಲೆದಾ ಡುತ್ತಿರುವ ಮುಗ್ಧ ಮಹಿಳೆ.

ಹತ್ತೊಂಭತ್ತು ವರ್ಷಗಳಿಂದ ಅಲೆದಾಟ

ಕಮಲಾಕ್ಷಿ ಅವರ ಪತಿ ಯು.ಎ.ದೇವರಾಜು ಎಂಬವರು ಶಿಕ್ಷಣ ಇಲಾಖೆಯಲ್ಲಿ ಡಿ ದರ್ಜೆ ನೌಕರರಾಗಿ ಕೆಲಸ ಮಾಡಿ ಕೊಂಡಿರುವಾಗ ಸುದರ್ಶನ ವೃತ್ತದ ಬಳಿಯ ಲೋಕೋಪಯೋಗಿ ಇಲಾಖಾ ವಸತಿಗೃಹದ ಸಮೀಪ (ಹಳೆ ಇಟ್ಟಿಗೆಗೂಡು) ಖಾಲಿ ಇರುವ ಕರ್ಣಂಗೇರಿ ಪಂಚಾಯ್ತಿ ವ್ಯಾಪ್ತಿಯ ಸ.ನಂ .೫೧೨/೧ ಜಾಗದಲ್ಲಿ ೩ಸೆಂಟ್ ಜಾಗಕ್ಕೆ ಬೇಲಿ ಹಾಕಿಕೊಂಡಿದ್ದರು. ನಂತರ ೨೦೦೫ರಲ್ಲಿ ದೇವರಾಜು ಅವರು ನಿಧನರಾದ ಬಳಿಕ ಕಮಲಾಕ್ಷಿ ಅವರಿಗೆ ಅನುಕಂಪದ ಆಧಾರದಲ್ಲಿ ಅದೇ ಶಿಕ್ಷಣ ಇಲಾಖೆಯಲ್ಲಿ ಡಿ ದರ್ಜೆ ಕೆಲಸ ಸಿಕ್ಕಿದೆ. ಬೇಲಿ ಹಾಕಿದ್ದ ಜಾಗದ ಹಕ್ಕುಪತ್ರಕ್ಕಾಗಿ ಆಗಿನಿಂದಲೇ ಕಂದಾಯ ಇಲಾಖೆ, ಮೂಡಾ, ನಗರಸಭೆ, ಜಿಲ್ಲಾಧಿಕಾರಿಗಳ ಕಚೇರಿ, ಜನಪ್ರತಿನಿಧಿಗಳಲ್ಲಿಗೆ ಅಲೆದಾಟ ಶುರು ಮಾಡಿದ್ದಾರೆ. ಆದರೆ, ಇಂದಿಗೂ ಒಂದಿಷ್ಟಗಲ ಜಾಗ ಇವರಿಗೆ ದÀಕ್ಕಿಲ್ಲ..!

ಕಟ್ಟಿದ್ದ ಮನೆ ಬೀಳಿಸಿದರು..!

ಕೆಲಸ ಮಾಡುತ್ತಾ, ಮಕ್ಕಳನ್ನು ಸಲಹುತ್ತಾ ಹೇಗೋ ಕಷ್ಟ ಪಟ್ಟು ಉಳಿಸಿದ್ದ ಹಣದೊಂದಿಗೆ ಸಾಲ ಮಾಡಿ ಇನ್ನೊಂದಿಷ್ಟು ಹಣ ಸೇರಿಸಿ ಬೇಲಿ ಹಾಕಿದ್ದ ಜಾಗದಲ್ಲಿ ಒಂದು ಪುಟ್ಟ ಮನೆ ಮಾಡಿಕೊಂಡಿದ್ದರು. ಕಲ್ಲು, ಇಟ್ಟಿಗೆ ಬಳಸಿ ಶೀಟ್ ಹಾಕಿ ಸುಮಾರು

(ಮೊದಲ ಪುಟದಿಂದ) ರೂ.೩ಲಕ್ಷ ವೆಚ್ಚ ಮಾಡಿ ಮೂರು ಕೋಣೆಗಳಿದ್ದ ಮನೆ ಕಟ್ಟಿಕೊಂಡಿದ್ದರು. ಹಕ್ಕು ಪತ್ರಕ್ಕಾಗಿ ನಗರ ಸಭೆಗೆ ಹೋಗಿದ್ದಾಗ ಆಗ ಅಧ್ಯಕ್ಷರಾಗಿದ್ದ ಕಾವೇರಮ್ಮ ಸೋಮಣ್ಣ ಅವರು ನಿವೇಶನ ಹಾಗೂ ಮನೆಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಅರ್ಜಿ ಸಲ್ಲಿಸಬಹುದು. ಮನೆ ನಿರ್ಮಾಣಕ್ಕೆ ಸಾಲ ಕೂಡ ಸಿಗಲಿದೆ ಎಂದು ಸಲಹೆ ನೀಡಿದ್ದರು. ಈ ಬಗ್ಗೆ ಈ ಮಹಿಳೆ ವಿಚಾರಿಸಿದಾಗ ಯಾರೋ ‘ಖಾಲಿ ಜಾಗ ಇದ್ದರೆ ಮಾತ್ರ ಮನೆ ಸಾಲ ಸಿಗೋದು’ ಅಂತ ಹೇಳಿದ್ದಾರೆ. ಇದನ್ನು ನಂಬಿದ ಈ ಮುಗ್ಧ ಮಹಿಳೆ ತಾನು ಕಷ್ಟ ಪಟ್ಟು ಕಟ್ಟಿದ ಮನೆಯನ್ನು ಕೆಡವಿ ಹಾಕಿ ಮತ್ತೆ ನಿವೇಶನಕ್ಕಾಗಿ ಅರ್ಜಿ ಗುಜರಾಯಿಸಿಕೊಂಡು ಕಾಯುತ್ತಿದ್ದಾರೆ..!

ಸರ್ವೆ-ಸ್ಕೆಚ್ ಆಗಿದೆ

ಕಮಲಾಕ್ಷಿ ಅವರು ನಿವೇಶನ ಕೋರಿ ಅರ್ಜಿ ಸಲ್ಲಿಸಿದ ಮೇರೆಗೆ ನಗರ ಸಭೆ ವತಿಯಿಂದ ಗುರುತಿಸಲಾದ ಜಾಗದ ಸರ್ವೆ ಮಾಡಿ ನಕಾಶೆ ತಯಾರು ಮಾಡಿಕೊಡುವಂತೆ ಭೂದಾಖಲೆಗಳ ಮಾಪನಾ ಇಲಾಖೆಗೆ ಸೂಚನೆ ನೀಡಲಾಗಿತ್ತು. ಅದರಂತೆ ೨೦೧೮ರಲ್ಲಿ ಭೂಮಾಪನಾ ಇಲಾಖೆಯವರು ಸರ್ವೆ ಮಾಡಿ, ನಕಾಶೆ ತಯಾರಿಸಿ ಕಡತವನ್ನು ನಗರಸಭೆಗೆ ಸಲ್ಲಿಸಿದ್ದಾರೆ. ನಂತರದಲ್ಲಿ ಯಾವದೇ ಪ್ರಕ್ರಿಯೆ ಮುಂದುವರಿದಿಲ್ಲ.

ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ನಿವೇಶನ ಕೋರಿ ಅರ್ಜಿ ಸಲ್ಲಿಸಿದ ಮೇರೆಗೆ ಅಲ್ಲಿಂದಲೂ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಕೈಗೊಂಡ ಕ್ರಮದ ಬಗ್ಗೆ ಅರ್ಜಿದಾರರಿಗೆ ಹಿಂಬರಹ ನೀಡುವಂತೆ ೨೦೧೬ರಲ್ಲಿ ಸೂಚಿಸಲಾಗಿದೆ. ಆದರೂ ಆಗಿಲ್ಲ.

ಉಪ ಕಾರ್ಯದರ್ಶಿಯಿಂದ ಪತ್ರ

ನಿವೇಶನ-ಹಕ್ಕು ಪತ್ರಕ್ಕಾಗಿ ಕಚೇರಿಗಳಿಗೆ ಅಲೆದಾಡಿ ಬೇಸತ್ತು ಕೊನೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿಗಳು ೨೦೧೫ರಲ್ಲಿ ಹಾಗೂ ಉಪ ಕಾರ್ಯದರ್ಶಿಗಳು ೨೦೧೮ರಲ್ಲಿ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮೂರು ಸುತ್ತೋಲೆಗಳನ್ನು ಕೂಡ ಕಳುಹಿಸಿದ್ದಾರೆ. ಆದರೂ ಯಾವದೇ ಪ್ರಗತಿ ಕಂಡಿಲ್ಲ.

ಕAದಾಯ ಪಾವತಿ..!

ತಾವು ಬೇಲಿ ಹಾಕಿಕೊಂಡು ಸ್ವಾಧೀನದಲ್ಲಿದ್ದ ಜಾಗಕ್ಕೆ ಅಂದಿನಿAದಲೇ ಕಂದಾಯ ಪಾವತಿಸುತ್ತಾ ಬಂದಿದ್ದಾರೆ. ಇತ್ತೀಚಿಗಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಯೊಜನೆಯಡಿಯಲ್ಲಿಯೂ ತೆರಿಗೆ ಪಾವತಿ ಮಾಡಿದ್ದಾರೆ. ನಗರಸಭೆಯಿಂದ ಇದಕ್ಕೆ ಅಧಿಕೃತವಾದ ರಶೀದಿಯನ್ನೂ ಕೂಡ ನೀಡಿದೆ. ಆದರೂ ಜಾಗ ಮಾತ್ರ ಕಮಲಾಕ್ಷಿ ಅವರ ಹೆಸರಿಗೆ ಆಗಿಲ್ಲ..!

ಗುಡಿಸಲು ತೆರವು..!

ಮನೆಯನ್ನು ಕೆಡವಿದ ಬಳಿಕ ವಿಧಿಯಿಲ್ಲದೆ ಕಮಲಾಕ್ಷಿ ಅವರು ಅದೇ ಜಾಗದಲ್ಲಿ ಕಂಬ ನೆಟ್ಟು, ಟಾರ್ಪಲಿನ್ ಬಳಸಿ ಪುಟ್ಟ ಗುಡಿಸಲು ಕಟ್ಟಿಕೊಂಡು ಮತ್ತೆ ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು. ಮನೆಯ ಅಡಿಪಾಯಕ್ಕೆ ಬೇಕಾದ ಕಲ್ಲುಗಳು, ಮರಳನ್ನು ತಂದು ದಾಸ್ತಾನಿರಿಸಿ ಅಡಿಪಾಯ ಹಾಕಲು ಗುಂಡಿ ತೋಡಿಸಿದ್ದರು. ಆದರೆ, ಇದೀಗ ಕಂದಾಯ ಇಲಾಖೆಯವರು ಅಲ್ಲಿದ್ದ ಗುಡಿಸಲನ್ನು ತೆರವು ಗೊಳಿಸಿ ಅದೇ ಜಾಗದಲ್ಲಿ ಶಿಶು ಕಲ್ಯಾಣ ಇಲಾಖೆ ಮೂಲಕ ಅಂಗನವಾಡಿ ನಿರ್ಮಾಣ ಕಾರ್ಯಕ್ಕೆ ಜಾಗ ನೀಡಲಾಗಿದೆ. ಇಳಿಜಾರು ಪ್ರದೇಶವಾಗಿದ್ದ ಜಾಗವನ್ನು ಸಮತಟ್ಟುಗೊಳಿಸಿ ಮನೆ ಮಾಡಿಕೊಂಡಿದ್ದ ಜಾಗದಿಂದ ಕಮಲಾಕ್ಷಿ ಅವರ ಕುಟುಂಬವನ್ನು ತೆರವುಗೊಳಿಸುವ ಪ್ರಯತ್ನ ಆಗುತ್ತಿದ್ದು, ಬೇರೆ ಕಡೆ ಜಾಗ ನೋಡಿಕೊಳ್ಳುವಂತೆ ಕಂದಾಯ ನಿರೀಕ್ಷಕರು ಬೆದರಿಕೆ ಹಾಕುತ್ತಿರುವದಾಗಿ ಕಮಲಾಕ್ಷಿ ಕಣ್ಣೀರು ಹಾಕುತ್ತಿದ್ದಾರೆ.

ಅಂಗನವಾಡಿಗೆ ಸೂಕ್ತವಲ್ಲ..!

ಈ ವ್ಯಾಪ್ತಿಯಲ್ಲಿ ಅಂಗನವಾಡಿ ನಿರ್ಮಾಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಡಿ ಅಲ್ಲಿನ ನೀರಿನ ಟ್ಯಾಂಕ್ ಬಳಿ ೫ಸೆಂಟ್ ಜಾಗ ಗುರುತಿಸಲಾಗಿದೆ. ಆದರೆ ಅಲ್ಲಿ ನಿರ್ಮಾಣ ಮಾಡದೆ ಈ ಬಡ ಮಹಿಳೆ ತನಗೆ ಹಾಗೂ ತನ್ನ ಮಕ್ಕಳಿಗಾಗಿ ಸೂರಿಗಾಗಿ ಮಾಡಿಕೊಂಡಿದ್ದ ಜಾಗದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸ್ಥಳೀಯರ ಪ್ರಕಾರ ಅಂಗನವಾಡಿಗೆ ಈ ಜಾಗ ಸೂಕ್ತವಲ್ಲ, ಇಳಿಜಾರು ಪ್ರದೇಶವಾಗಿದ್ದು, ಅಪಾಯಕಾರಿಯಾಗಿದೆ, ಅಲ್ಲದೆ, ಮೇಲಿನ ವಸತಿ ಗೃಹಗಳ ಕೊಳಚೆ ನೀರು ಕೂಡ ಹರಿದು ಹೋಗುತ್ತಿದೆ, ಇಲ್ಲಿ ಅಂಗನವಾಡಿಗಳಿಗೆ ಹೋಗುವ ಮಕ್ಕಳು ಕೂಡ ಇಲ್ಲ ಎಂದು ಹೇಳುತ್ತಾರೆ.

ವಿಶೇಷ ಚೇತನ ಮಕ್ಕಳು..

ಕಮಲಾಕ್ಷಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗನಿಗೆ ೨೫ ವರ್ಷ, ಮಗಳಿಗೆ ೨೩ ವರ್ಷ. ಮದುವೆಯ ವಯಸ್ಸಿಗೆ ಬಂದಿದ್ದರೂ ಇನ್ನೂ ಕೂಡ ಮದುವೆಯಾಗಿಲ್ಲ. ಕಾರಣ ಇಬ್ಬರೂ ಕೂಡ ಮಾನಸಿಕವಾಗಿ ಸದೃಢರಾಗಿಲ್ಲ. ಇಬ್ಬರೂ ಶೇ.೭೫ರಷ್ಟು ಸಮಸ್ಯೆ ಹೊಂದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಇಂತಹ ಮಕ್ಕಳನ್ನು ಸಲಹುತ್ತ ಒಂದು ಸೂರಿಗಾಗಿ ಅಲೆದಾಡುತ್ತಿರುವ ಈ ಮಹಿಳೆಯತ್ತ ಯಾರೂ ಅನುಕಂಪ ತೋರದಿರುವದು ವಿಪರ್ಯಾಸವೇ ಸರಿ.

ಕೆಲಸ ಬಿಟ್ಟರೆ ಜೀವನಕ್ಕೆ ಬೇರಾವದೇ ಮೂಲಗಳಿಲ್ಲ. ಈಗಾಗಲೇ ೫೭ ವರ್ಷವಾಗಿದ್ದು, ಇನ್ನು ಮೂರು ವರ್ಷದಲ್ಲಿ ನಿವೃತ್ತಿ ಬರಲಿದೆ. ಸದ್ಯಕ್ಕೆ ವಸತಿಗೃಹವಿದೆ, ನಂತರ ಎಲ್ಲಿಗೆ ಹೋಗೋದು ಎಂದು ಮಾನಸಿಕವಾಗಿ ನೊಂದಿರುವ ಕಮಲಾಕ್ಷಿ ಕಣ್ಣೀರಿಡುತ್ತಾರೆ. ಜೀವಕ್ಕೆ ಅಪಾಯವನ್ನು ತಂದುಕೊಳ್ಳುವ ರೀತಿಯಲ್ಲಿ ಏನೇನೋ ಮಾತನಾಡುತ್ತಾರೆ. ಇತ್ತ ಇಂತಹ ಪಾಪದ ಹೆಂಗಸಿಗೆ ಈ ರೀತಿ ಅನ್ಯಾಯ ಮಾಡಬಾರದೆಂದು ಅಕ್ಕ ಪಕ್ಕದವರು ಕೂಡ ನೊಂದು ನುಡಿಯುತ್ತಾರೆ.

ನೂರಾರು ಎಕರೆ ಸರಕಾರೀ ಜಾಗವನ್ನು ಒತ್ತುವರಿ ಮಾಡಿಕೊಂಡವರು, ಅಕ್ರಮವಾಗಿ ಕಟ್ಟಡ, ರೆಸಾರ್ಟ್ಗಳನ್ನು ನಿರ್ಮಿಸಿಕೊಂಡು ಮೆರೆಯುತ್ತಿರುವ ಭಲಾಢ್ಯರ ವಿರುದ್ಧ ಸೊಲ್ಲೆತ್ತದ ಆಡಳಿತ ವರ್ಗ, ಜನಪ್ರತಿನಿಧಿಗಳು ಬಡಪಾಯಿಗಳ ಮೇಲೆ ಬರೆ ಎಳೆಯುವದು ಎಷ್ಟು ಸರಿ..? ಇನ್ನಾದರೂ ಜಿಲ್ಲಾಡಳಿತ ಗಮನ ಹರಿಸಿ ಮೂರು ಮುಗ್ಧ ಜೀವಗಳು ಬೀದಿಗೆ ಬಾರದಂತೆ ಜೀವನ ನಡೆಸಲು ಅವಕಾಶ ಮಾಡಿಕೊಡಲಿ ಎಂಬದು ನಾಗರಿಕ ಸಮಾಜದ ಆಶಯವಾಗಿದೆ.

? ಕುಡೆಕಲ್ ಸಂತೋಷ್