ಗೋಣಿಕೊಪ್ಪ, ಡಿ. ೨೭: ಕೊರೊನಾದಿಂದ ಮೃತಪಟ್ಟ ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೂ ಸರ್ಕಾರ ೫೦ ಸಾವಿರ ರೂ. ಪರಿಹಾರ ನೀಡುತ್ತಿದ್ದು, ಸ್ಪಷ್ಟ ದಾಖಲೆ ನೀಡಿ ಪಡೆದುಕೊಳ್ಳಬಹುದು ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು.

ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ಪೊನ್ನಂಪೇಟೆ ಸಾಮರ್ಥ್ಯ ಸೌಧದಲ್ಲಿ ಚೆಕ್ ವಿತರಿಸಿ ಮಾತನಾಡಿ, ಸಾವಿಗೆ ಬೆಲೆ ಕಟ್ಟಲು ಆಗುವುದಿಲ್ಲ. ಆದರೂ, ಕುಟುಂಬಕ್ಕೆ ಸರ್ಕಾರ ಆರ್ಥಿಕವಾಗಿ ಪರಿಹಾರ ನೀಡಲು ಮುಂದಾಗಿದ್ದು, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಸಂತ್ರಸ್ತ ಕುಟುಂಬಕ್ಕೆ ಪ್ರಸ್ತುತ ೧ ಲಕ್ಷ ರೂ. ಪರಿಹಾರ ನೀಡುತ್ತಿದೆ. ಎಪಿಎಲ್ ಪಡಿತರ ಹೊಂದಿರುವ ಕುಟುಂಬಕ್ಕೆ ೫೦ ಸಾವಿರ ಪರಿಹಾರ ಪಡೆದು ಕೊಳ್ಳಲು ಅವಕಾಶವಿದ್ದು, ಸ್ಪಷ್ಟ ದಾಖಲೆ ನೀಡಿದಲ್ಲಿ, ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ವೀರಾಜಪೇಟೆ, ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ೩೩ ಸಂತ್ರಸ್ತ ಕಟುಂಬಕ್ಕೆ ತಲಾ ೧ ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ಯೋಗಾನಂದ ಮಾಹಿತಿ ನೀಡಿದರು. ಎಂಎಲ್‌ಸಿ ಸುಜಾ ಕುಶಾಲಪ್ಪ, ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ತಾಲೂಕು ಅಧ್ಯಕ್ಷ ಗಿರೀಶ್‌ಗಣಪತಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಸಿ. ಅಪ್ಪಣ್ಣ ಇದ್ದರು.