ಮರಗೋಡು, ಡಿ. ೨೭: ಇಲ್ಲಿನ ಭಾರತಿ ಹೈಸ್ಕೂಲ್ ಮೈದಾನದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಕೊಡಗು ಗೌಡ ಕುಟುಂಬಗಳ ನಡುವಿನ ೫+೨ ಫುಟ್ಬಾಲ್ ಪಂದ್ಯಾಟದಲ್ಲಿ ಕಟ್ಟೆಮಾಡು ಗ್ರಾಮದ ಪಾಣತ್ತಲೆ ತಂಡ ಪಶಸ್ತಿ ಗೆದ್ದು ಕೊಂಡಿದೆ.
ವೈಷ್ಣವಿ ಫ್ರೆಂಡ್ಸ್ ತಂಡ ಈ ಪಂದ್ಯಾವಳಿ ಆಯೋಜನೆ ಮಾಡಿತ್ತು. ಫೈನಲ್ ಪಂದ್ಯದಲ್ಲಿ ಪಡಿಕ್ಕಲ್ ತಂಡವನ್ನು ರೋಚಕ ಹೋರಾಟದಲ್ಲಿ ೨-೦ ಗೋಲುಗಳಿಂದ ಮಣಿಸಿ ೩೦ ಸಾವಿರ ನಗದು ಮತ್ತು ಪಾರಿತೋಷಕ ಗೆದ್ದುಕೊಂಡಿತು. ಎರಡನೇ ಪ್ರಶಸ್ತಿ ಜಯಿಸಿದ ಪಡಿಕ್ಕಲ್ ತಂಡ ೨೦ ಸಾವಿರ ನಗದು ಮತ್ತು ಟ್ರೋಫಿ ಮುಡಿಗೇರಿಸಿಕೊಂಡಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಪಾಣತ್ತಲೆ ತಂಡ ತನ್ನದೇ ಊರಿನ ಕಟ್ಟೆಮನೆ ತಂಡವನ್ನು ೨-೦ ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಪಂದ್ಯದಲ್ಲಿ ಪರ್ಲಕೋಟಿ ತಂಡವನ್ನು ಮಣಿಸಿದ ಪಡಿಕ್ಕಲ್ ತಂಡ ಫೈನಲ್ಗೇರಿತು. ಪಂದ್ಯಾವಳಿಯಲ್ಲಿ ಒಟ್ಟು ೬೪ ತಂಡಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಮರಗೋಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂಗೀರ ಸತೀಶ್, ತಾಲೂಕು ಯುವ ಒಕ್ಕೂಟ ಅಧÀ್ಯಕ್ಷ ನವೀನ್ ದೇರಳ ಸೇರಿದಂತೆ ಅತಿಥಿ ಗಣ್ಯರು ಹಾಜರಿದ್ದರು.
(ಮೊದಲ ಪುಟದಿಂದ)
ಪAದ್ಯಾವಳಿಯಲ್ಲಿ ಅತ್ಯಧಿಕ ಗೋಲು ದಾಖಲಿಸಿದ ಪ್ರಶಸ್ತಿ ಪಾಣತ್ತಲೆ ವಿಕ್ರಂ ಪಾಲಾದರೆ, ಅತ್ಯುತ್ತಮ ಗೋಲಿಯಾಗಿ ಪಡಿಕ್ಕಲ್ ತಂಡದ ಪವನ್ ಪ್ರಶಸ್ತಿ ಗೆದ್ದುಕೊಂಡರು. ಕಟ್ಟೆಮನೆ ತಂಡದ ಪ್ರೀತಂ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು. ಉದಯೋನ್ಮುಖ ಆಟಗಾರನಾಗಿ ಬೊಳ್ಳೂರು ಗಗನ್ ಪ್ರಶಸ್ತಿ ಪಡೆದುಕೊಂಡರು. ಅತ್ಯುತ್ತಮ ತಂಡವಾಗಿ ಪರ್ಲಕೋಟಿ ತಂಡ ಆಯ್ಕೆಯಾಯಿತು. ಸೆಮಿಫೈನಲ್ನಲ್ಲಿ ಸೋಲನುಭವಿಸಿದ ಕಟ್ಟೆಮನೆ ಮತ್ತು ಪರ್ಲಕೋಟಿ ತಂಡಕ್ಕೆ ತಲಾ ಐದು ಸಾವಿರ ಸಮಾಧಾನಕರ ಪ್ರಶಸ್ತಿ ನೀಡಲಾಯಿತು.