ಮಡಿಕೇರಿ, ಡಿ. ೨೭: ಕಾನೂನು ಸೇವಾ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ಜನತೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಕರೆ ನೀಡಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾನೂನು ಸೇವಾ ಶಿಬಿರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇದುವರೆಗೆ ಇದ್ದ ಲೋಕ ಅದಾಲತ್ ಹಾಗೂ ಉಚಿತ ಕಾನೂನು ನೆರವು ಘಟಕದ ಜೊತೆ ನೂತನ ಸೇರ್ಪಡೆಯಾಗಿ ಈ ಕಾರ್ಯಕ್ರಮವನ್ನು ಕಾನೂನು ಸೇವಾ ಪ್ರಾಧಿಕಾರದಿಂದ ಏರ್ಪಡಿಸಲಾಗಿದ್ದು, ಇದರಿಂದ ಜನತೆ ಕಾನೂನು ನೆರವು ಪಡೆಯಬಹುದಾಗಿದೆ. ಸರ್ಕಾರ ರೂಪಿಸುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವಲ್ಲಿ ಇಂತಹ ಶಿಬಿರಗಳು ಸಹಕಾರಿ ಎಂದು ಹೇಳಿದ ಬೋಪಣ್ಣ ಅವರು ಕಾನೂನು ಪ್ರಾಧಿಕಾರವು ಸರ್ಕಾರ ಹಾಗೂ ಜನರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ ಎಂದು ನುಡಿದರು. ಸರ್ಕಾರದ ವಿವಿಧ ಇಲಾಖೆಯ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ತಲುಪಿಸುವ ನಿಟ್ಟಿನಲ್ಲಿ ವಸ್ತು ಪ್ರದರ್ಶನ ಏರ್ಪಡಿಸಿ ಮಾಹಿತಿ ನೀಡಲಾಗುತ್ತಿದೆ ಎಂದು ಬೋಪಣ್ಣ ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರು ಮಾತನಾಡಿ, ಸಂವಿಧಾನದ ಧ್ಯೇಯದಂತೆ ಯಾವೊಬ್ಬ ಪ್ರಜೆಯೂ ನ್ಯಾಯದಾನದಿಂದ ವಂಚಿತರಾಗ ಬಾರದು. ಪ್ರತಿಯೊಬ್ಬರಿಗೂ ಕಾನೂನಿನ ನೆರವು ಸಿಗುವಂತಾಗ ಬೇಕು. ಈ ದಿಸೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಕಾರ್ಯೋನ್ಮುಖ ವಾಗಿದೆ. ಇತ್ತೀಚೆಗೆ ನಡೆದ ಲೋಕ ಅದಾಲತ್‌ನಲ್ಲಿ ೧೨ ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿ ಸಲಾಗಿದ್ದು, ೬೩೦೦ ಕೋಟಿ ಹಣವನ್ನು ಸರ್ಕಾರಕ್ಕೆ ಉಳಿಸಲಾಗಿದೆ. ಎಲ್ಲಾ ವಕೀಲರುಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ವೀರಪ್ಪ ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಜಿನರಾಳ್ಕರ್ ಭೀಮರಾವ್ ಲಗಮಪ್ಪ ಅವರು ಮಾತನಾಡಿ, ಕೊಡಗಿನ ಕಾನೂನು ಸೇವಾ ಪ್ರಾಧಿಕಾರವು ಬದ್ಧತೆಯಿಂದ ಕೆಲಸ ಮಾಡುತ್ತಿದ್ದು, ಕಾನೂನು ಸೇವಾ ಪ್ರಾಧಿಕಾರದಿಂದ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಾವಿರಕ್ಕೂ ಹೆಚ್ಚು ಕಾನೂನು

(ಮೊದಲ ಪುಟದಿಂದ) ಅರಿವು ಶಿಬಿರಗಳನ್ನು ಏರ್ಪಡಿಸಿ ೪ ಲಕ್ಷಕ್ಕೂ ಅಧಿಕ ಜನರಿಗೆ ಮಾಹಿತಿ ನೀಡಲು ಶ್ರಮಿಸಲಾಗಿದೆ ಎಂದು ಅವರು ತಿಳಿಸಿದರು. ಇಲ್ಲಿನ ಜನರಿಗೆ ಕಾನೂನು ಸೇವೆಗಳನ್ನು ಒದಗಿಸುವಲ್ಲಿ ಕಟಿಬದ್ಧವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ .ಎ.ಎಸ್. ಬೋಪಣ್ಣ ಹಾಗೂ ಬಿ. ವೀರಪ್ಪ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ್ ಶೆಟ್ಟಿ, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಿಕ ವಿಲೇಖನಾಧಿಕಾರಿ ಕೆ.ಎಸ್. ಭರತ್‌ಕುಮಾರ್, ಜಿ.ಪಂ. ಸಿಇಓ ಭಂವರ್ ಸಿಂಗ್ ಮೀನಾ ಉಪಸ್ಥಿತರಿದ್ದರು.

ಇದೇ ಸಂದರ್ಭ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ ಅವರು ಪ್ರಾಸ್ತಾವಿಕವಾಗಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಅನಿತಾ ನಿರೂಪಿಸಿ, ಶಂಕ್ರಯ್ಯ ನಾಡಗೀತೆ ಹಾಡಿದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ವಂದಿಸಿದರು.

ಗಮನ ಸೆಳೆದ ವಸ್ತು ಪ್ರದರ್ಶನ ಮಳಿಗೆ

ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಹೀಗೆ ವಿವಿಧ ಇಲಾಖೆಗಳ ಸಹಕಾರದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಮಳಿಗೆ ಗಮನ ಸೆಳೆಯಿತು. ಗೌಡ ಸಮಾಜದ ಪ್ರವೇಶ ದ್ವಾರದ ಬಳಿ ನಿರ್ಮಿಸಲಾಗಿದ್ದ ಕೃಷಿ ಇಲಾಖೆ ಮಳಿಗೆ ವಿವಿಧ ಇಲಾಖೆಗಳು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬAಧಿಸಿದAತೆ ಕರಪತ್ರ, ಬಿತ್ತಿ ಪತ್ರ ಒಳಗೊಂಡ ಮಾಹಿತಿಯನ್ನು ನೀಡಲಾಗುತ್ತಿತ್ತು.

ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಸಮಗ್ರ ಗಿರಿಜನ ಅಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ, ಆಯುಷ್, ಯುವ ಸಬಲೀಕರಣ ಮತ್ತು ಕ್ರೀಡೆ, ಜವಳಿ ಮತ್ತು ಕೈಮಗ್ಗ, ಕೈಗಾರಿಕೆ, ಸಹಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣಾ ಘಟಕ, ವಿಕಲಚೇತನರ ಇಲಾಖೆ, ನಗರಸಭೆ, ಆಯುಷ್, ಸಾರ್ವಜನಿಕ ಶಿಕ್ಷಣ, ವಿವಿಧ ಅಭಿವೃದ್ಧಿ ನಿಗಮಗಳು ಹೀಗೆ ಹಲವು ಇಲಾಖೆಗಳು ವಸ್ತು ಪ್ರದರ್ಶನ ಮಳಿಗೆ ಏರ್ಪಡಿಸಿದವು. ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರು ವಸ್ತು ಪ್ರದರ್ಶನ ಮಳಿಗೆ ವೀಕ್ಷಿಸಿ, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು.