ಮಡಿಕೇರಿ, ಡಿ. ೨೪: ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯು ನಗರಸಭೆಯಾಗಿದ್ದು, ಈ ನಗರದ ವ್ಯಾಪ್ತಿ ೧೫.೯೨ ಚ.ಕಿ.ಮೀ.ಗಳಾಗಿವೆ. ೨೩ ವಾರ್ಡ್ಗಳನ್ನು ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ೨೦೧೧ರ ಜನಗಣತಿಯಂತೆ ೩೩,೩೮೧ ರಷ್ಟು ಜನಸಂಖ್ಯೆ ಇರುವುದಾಗಿ ಪೌರಾಡಳಿತ ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಎಂ.ಟಿ.ಬಿ. ನಾಗರಾಜು ಅವರು ಮಾಹಿತಿ ಒದಗಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ಜನಸಂಖ್ಯೆ, ವಾರ್ಡ್ ಹಾಗೂ ನಿಖರ ವಿಸ್ತೀರ್ಣದ ಕುರಿತು ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಕುಶಾಲನಗರವು ಪ್ರಸ್ತುತ ಪಟ್ಟಣ ಪಂಚಾಯಿತಿಯಾಗಿದ್ದು, ೧೬ ವಾರ್ಡ್ನೊಂದಿಗೆ ೩.೨೬ ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಇಲ್ಲಿನ ಜನಸಂಖ್ಯೆ ೧೫,೩೨೬ ರಷ್ಟಿದೆ.

ಕೇವಲ ೧.೩೩ ಚ.ಕಿ.ಮೀ. ವಿಸ್ತೀರ್ಣ, ೧೧ ವಾರ್ಡ್ ಹೊಂದಿರುವ ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ ೬೭೨೯ ರಷ್ಟು ಜನಸಂಖ್ಯೆ ಇದ್ದರೆ, ೨.೮೩ ಕಿ.ಮೀ. ವಿಸ್ತೀರ್ಣ, ೧೮ ವಾರ್ಡ್ ಹೊಂದಿರುವ ವೀರಾಜಪೇಟೆ ಪ.ಪಂ. ವ್ಯಾಪ್ತಿಯಲ್ಲಿ ೨೦೧೧ರ ಜನಗಣತಿಯ ಪ್ರಕಾರವಾಗಿ ೧೭,೨೪೬ ರಷ್ಟು ಜನಸಂಖ್ಯೆ ಇರುವದಾಗಿ ಸಚಿವರು ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.