(ವಿಶೇಷ ವರದಿ: ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಡಿ. ೨೫: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಕೀರೆಹೊಳೆ ಬದಿಯಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಕಟ್ಟಡ, ತಡೆಗೋಡೆ ನಿರ್ಮಿಸಿರುವುದನ್ನು ತೆರವುಗೊಳಿಸಲು ಮುಂದಾದ ವೇಳೆ ಹೊಳೆ ಬದಿಯಿರುವ ಜಾಗದ ಮಾಲೀಕರು ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ತರುವ ಮೂಲಕ ಮುಂದುವರೆಯುತ್ತಿದ್ದ ತೆರವು ಕಾರ್ಯಕ್ಕೆ ತಡೆ ಉಂಟಾಗಿದೆ.
ಕಳೆದ ೨೫ ದಿನಗಳಿಂದ ನಗರದ ಬೈಪಾಸ್ ರಸ್ತೆಯ ಕೈತೋಡು ಹಾಗೂ ಇದರ ಸಮೀಪದ ಮತ್ತೊಂದು ಕೈ ತೋಡುವಿನ ಅತಿಕ್ರಮಿತ ಜಾಗವನ್ನು ತಾಲೂಕು ಆಡಳಿತದ ವತಿಯಿಂದ ತೆರವು ಮಾಡಲಾಗಿತ್ತು. ಬಹುಪಾಲು ತೆರವು ಕಾರ್ಯ ಪೂರ್ಣಗೊಂಡಿತ್ತು. ನಗರದ ಪ್ರಮುಖ ಕೀರೆಹೊಳೆ ಒತ್ತುವರಿಯನ್ನು ತೆರವುಗೊಳಿಸುವ ಸಂದರ್ಭ ಹೊಳೆಯ ಬದಿಯಲ್ಲಿರುವ ಕಟ್ಟಡ ಮಾಲೀಕರು ತೆರವು ಕಾರ್ಯದ ವಿಷಯದಲ್ಲಿ ತಾಲೂಕು ತಹಶೀಲ್ದಾರ್ ನೋಟಿಸು ಜಾರಿಗೊಳಿಸದೆ ಏಕಾಏಕಿ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ನ್ಯಾಯಾಲಯ ತೆರವು ಕಾರ್ಯಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಇದೀಗ ಕೀರೆಹೊಳೆಯ ಬದಿಯ ತೆರವು ಕಾರ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ.
ಕೀರೆಹೊಳೆ ಅತಿಕ್ರಮಣ ಮಳೆಗಾಲದಲ್ಲಿ ಜನರಿಗಾಗುವ ತೊಂದರೆಯ ಬಗ್ಗೆ ಈ ಹಿಂದೆ ‘ಶಕ್ತಿ’ ಬೆಳಕು ಚೆಲ್ಲಿತ್ತು. ಇತ್ತೀಚೆಗೆ ವೀರಾಜಪೇಟೆ ತಾಲೂಕಿಗೆ ಆಗಮಿಸಿದ್ದ ತಹಶೀಲ್ದಾರ್ ಯೋಗಾನಂದ ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿ, ಇಲ್ಲಿನ ವ್ಯವಸ್ಥೆಯನ್ನು ಮನಗಂಡಿದ್ದರು. ಕೀರೆ ಹೊಳೆ ಹಾಗೂ ಬೈಪಾಸ್ ಕೈತೋಡಿಗೆ ಕಾಯಕಲ್ಪ ನೀಡಲು ಯೋಜನೆ ರೂಪಿಸಿದರು. ಹಂತ ಹಂತವಾಗಿ ಸರ್ವೆ ಇಲಾಖೆಯಿಂದ ಸರ್ವೆ ಕಾರ್ಯ ನಡೆಸಿ ವರದಿ ಪಡೆದಿದ್ದರು. ಹೊಳೆಯ ಎರಡು ಬದಿಯಲ್ಲಿ ಒತ್ತುವರಿಯಾಗಿರುವುದು ತಿಳಿಯುತ್ತಿದ್ದಂತೆಯೇ ಇವುಗಳನ್ನು ತೆರವುಗೊಳಿಸಲು ತೀರ್ಮಾನಿಸಿದ್ದರು. ಈ ವೇಳೆ ಅನೇಕ ಒತ್ತಡಗಳು ತಹಶೀಲ್ದಾರ್ ಮೇಲೆ ಬಂದಿದ್ದವು. ಯಾವುದೇ ಒತ್ತಡಗಳಿಗೆ ಮಣಿಯದ ಅಧಿಕಾರಿ ಸಿಬ್ಬಂದಿಗಳ ಸಹಕಾರ ಪಡೆದು ತೆರವು ಕಾರ್ಯಕ್ಕೆ ಮುಂದಾದರು. ಇದೀಗ ಬೈಪಾಸ್ ಕೈತೋಡು ಒತ್ತುವರಿ ಜಾಗವನ್ನು ಬಿಡಿಸಿ ಮೂಲ ನದಿ ಇರುವಂತೆಯೇ ಮಾಡಿದ್ದಾರೆ. ಅಧಿಕಾರಿಗಳ ಕಾರ್ಯಕ್ಕೆ ನಾಗರೀಕರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದರು.