ಇತ್ತೀಚೆಗೆ ವೀರಾಜಪೇಟೆಯಲ್ಲಿ ವೈದ್ಯರೊಬ್ಬರು ಏಳು ಸಾವಿರ ರೂ. (ಐದು ಸಾವಿರ ರೂ.ಕೊಟ್ಟಾಗಿದ್ದು ನಗದು ಎರಡು ಸಾವಿರ ರೂ.) ಲಂಚ ಸ್ವೀಕರಿಸುವ ಸಮಯದಲ್ಲಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದವರು ಹಿಡಿದಿದ್ದಾರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಒಂದು ಲಕ್ಷ ರೂ.ಗಿಂತಲೂ ಹೆಚ್ಚು ಸಂಬಳ ಸಿಗುತ್ತಿರುವ ವೈದ್ಯರುಗಳು ಆರ್ಥಿಕವಾಗಿ ದುರ್ಬಲರಿಗೂ ಇಂತಿಷ್ಟು ಹಣ ಕೊಟ್ಟರೇ ಆಪರೇಶನ್ ಮಾಡುತ್ತೇನೆನ್ನುವುದು ಸರಿಯಲ್ಲ. ವೈದ್ಯರಿಗೆ ಸರಕಾರದ ಸಾಕಷ್ಟು ಸಂಬಳ ಸಿಗುತ್ತಿದೆ, ಅಲ್ಲದೆ ಅವರಿಗೆ ಅವರ ಡ್ಯೂಟಿ ನಂತರ ಖಾಸಗೀ ಪ್ರಾಕ್ಟಿಸ್ ಮಾಡಲು ಅವಕಾಶವಿದೆ. ಅಲ್ಲಿಯೂ ಅವರು ಹೆಚ್ಚಿನ ಆದಾಯ ಪಡೆಯಬಲ್ಲರು. ಆದ್ದರಿಂದ ಡ್ಯೂಟಿಯಲ್ಲಿರುವ ಸಮಯದಲ್ಲಿ ಬರುವ ರೋಗಿಗಳನ್ನು ಸರಕಾರದ ನಿಯಮದಂತೆಯೇ ನೋಡಬೇಕು. ಖಾಸಗೀ ಚಿಕಿತ್ಸೆ ಕೊಡುವಲ್ಲಿ ಅವರು ತಮಗೆ ಬೇಕಾದಂತೆ ದರ ಹೇಳುವ ಸ್ವಾತಂತ್ರö್ಯವಿದೆ. ಅಲ್ಲಿ ಇಷ್ಟ ಬಂದಷ್ಟು ಸಂಪಾದಿಸಬಹುದು. ಹೀಗೆ ವರ್ತಿಸುವುದರಿಂದ ಅವರು ಗೌರವವನ್ನೂ ಉಳಿಸಿಕೊಳ್ಳುತ್ತಾರೆ. ಆದ್ದರಿಂದ ಅವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟದ್ದಕ್ಕೆ ಹಣ ಕೇಳುವುದು ಅದರಲ್ಲೂ ಆರ್ಥಿಕವಾಗಿ ದುರ್ಬಲರಿಂದಲೂ ಹಣ ಬೇಕೆನ್ನುವುದು ಖಂಡಿತಾ ತಪ್ಪು ಮತ್ತು ದುರದೃಷ್ಟಕರ.

ನಮ್ಮ ಸಮಾಜದಲ್ಲಿ ಬಹುತೇಕರು ಪ್ರಾಮಾಣಿಕರಿದ್ದು, ಇಂತಹವರು ಕೆಲವರೇ ಇದ್ದಾರೆಂದರೆ ಆಗ ಈ ರೀತಿ ಅಂತಹವರನ್ನು ಹಿಡಿದು ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಳುವುದರಲ್ಲಿ ಅರ್ಥವಿರುತ್ತದೆ.

ಆದರೆ ನಮ್ಮ ಸಮಾಜ ಹಾಗಿದೆಯೇ ಎಂದರೆ ಇಲ್ಲ. ಲಂಚದ ಹಾವಳಿ ಸರಕಾರದ ಯಾವ ಕಚೇರಿಯಲ್ಲಿ ಇಲ್ಲ? ಯಾವ ಕಚೇರಿಯಲ್ಲಿ ಲಂಚಕೊಡದೆ ಕೆಲಸ ಆಗುತ್ತದೆ? ದುರ್ಬೀನು ಹಿಡಿದು ಹುಡುಕಬೇಕು. ಉತ್ತರಕೊಟ್ಟವರಿಗೆ ಬಹುಮಾನವಿದೆ ಎಂದು ಘೋಷಿಸಿದರೆ ಯಾರೂ ಗೆಲ್ಲಲಾರರು.

ಹೆಚ್ಚಿನ ಕಚೇರಿಗಳಲ್ಲಿ ಲಂಚದ ಮೊತ್ತವೂ ಬೃಹತ್ತಾಗಿದೆ. ತಹಶೀಲ್ದಾರರ ಕಚೇರಿಗಳಲ್ಲಿ ಏಜೆಂಟರುಗಳ ಮೂಲಕ ಲಂಚ ಕೊಟ್ಟು ಅವರಲ್ಲಿಗೆ ಹೋದರೆ ಮಾತ್ರವೇ ಕೆಲಸವಾಗುವುದೆಂದೂ ಇಲ್ಲವಾದರೆ ಕೆಲಸವಾಗುವುದಿಲ್ಲವೆಂದೂ ಹೇಳಲಾಗುತ್ತದೆ. ಇದೇ ಸ್ಥಿತಿ ಬಹುತೇಕ ಕಚೆೆÃರಿಗಳಲ್ಲಿ ಇವೆ ಎನ್ನುವುದು ಸರ್ವವಿಧಿತ. ಸರಕಾರಿ ಕಚೇರಿಗಳಲ್ಲಿ ಈ ರೀತಿ ವ್ಯಾಪಕವಾಗಿ ಲಂಚದ ಪಿಡುಗು ಇರಲು ಮುಖ್ಯ ಕಾರಣ ಅವರನ್ನು ನಿಯಂತ್ರಿಸುವ ಸರಕಾರ ಅಂದರೆ ಶಾಸಕರುಗಳು ಮತ್ತು ಮಂತ್ರಿಗಳು.

ಪAಚಾಯತ್ ಸದಸ್ಯರಿಂದ ಪ್ರಾರಂಭಿಸಿ ಲೋಕಸಭಾ ಸದಸ್ಯರವರೆಗೆ, ಗ್ರಾಮಮಟ್ಟದಿಂದ ಹಿಡಿದು ದೆಹಲಿವರೆಗೆ ಹೇಗಿದೆ ವ್ಯವಸ್ಥೆ ಎಂದು ನಮಗೆ ತಿಳಿದಿದೆ, ಜನಪ್ರತಿನಿಧಿಗಳೆಂದು ಕೊಬ್ಬಿನಿಂದ ನಡೆಯುವವರು ಪಂಚಾಯತ್ ಸದಸ್ಯರಿಂದ ಆರಂಭಿಸಿ ಲೋಕಸಭಾ ಸದಸ್ಯರುಗಳು, ಮಂತ್ರಿಗಳವರೆಗೆ ಕಮೀಶನ್‌ಗೆ ಕೈ ಒಡ್ಡದವರೆಷ್ಟು ಮಂದಿ ಇದ್ದಾರೆ? ಬಹುತೇಕರು ಕಮೀಶನ್ ಮತ್ತು ಇತರ ಸವಲತ್ತುಗಳಿಗಾಗಿ ಜೊಲ್ಲು ಸುರಿಸಿ ನಿಲ್ಲುವವರೆಂದು ನಮಗೆ ಗೊತ್ತಿದೆ.

ಸೇವಾಕ್ಷೇತ್ರವಾಗಬೇಕಾದ ರಾಜಕೀಯ ರಂಗ ಇಂದು ವ್ಯಾಪಾರೀ ಕ್ಷೇತ್ರವಾಗಿ ಮಾರ್ಪಟ್ಟಿದೆ. ಚುನಾವಣೆಯಲ್ಲಿ ಹಣ ಕೊಟ್ಟು ಮತ ಪಡೆಯುವುದು ಇಂದು ಸರ್ವೇಸಾಮಾನ್ಯ ಎಂದಾಗಿದೆ. ಅಪೂರ್ವ ಸಂದರ್ಭವನ್ನು ಬಿಟ್ಟು ಉಳಿದೆಡೆ ಯಾರು ಹೆಚ್ಚು ಹಣ ಕೊಡುತ್ತಾನೋ ಅವನು ಗೆಲುತ್ತಾನೆ ಎಂದಾಗಿದೆ.

ವಿಧಾನಪರಿಷತ್ ಸದಸ್ಯತ್ವಕ್ಕಾಗಿ ಈಗಷ್ಟೇ ನಡೆದಿರುವ ಚುನಾವಣೆಯನ್ನೇ ತೆಗೆದುಕೊಳ್ಳೋಣ. ಸುಮಾರು ೧೬೪೦ರಷ್ಟು ಮತದಾರರಿರುವ ಕ್ಷೇತ್ರದಲ್ಲಿ ಒಂದು ಮತಕ್ಕಾಗಿ ೫೦ ಸಾವಿರದಿಂದ ೭೫ ಸಾವಿರ ರೂ. ಕೊಡಲಾಗಿದೆ ಎಂದೂ ಬಹುತೇಕ ಸದಸ್ಯರುಗಳು ಎರಡೂ ಕಡೆಗಳಿಂದ ಹಣ ಪಡೆದಿರುವರೆಂದೂ ಸುಮಾರು ೧೨ ಕೋಟಿ ರೂ ಪಾವತಿಯಾಗಿದೆ ಎಂದೂ ಮಾಧ್ಯಮಗಳು ವರದಿ ಮಾಡಿವೆ. ಈ ಮತದಾರು ಸಾಮಾನ್ಯ ಮತದಾರರಲ್ಲ. ‘ನಾವು ಜನಪ್ರತಿನಿಧಿಗಳು’ ಎಂದು ಬೀಗಿ ನಡೆಯುವವರು. ಇವರಿಂದ ಮತ ಪಡೆಯಲು ಈ ರೀತಿ ಹಣ ಕೊಡಬೇಕೆಂದಾದರೆ ಅಂತಹವರು ನಡೆಸುವ ಆಡಳಿತ ಹೇಗಿರುತ್ತದೆಂದು ನಾವು ಅರ್ಥ ಮಾಡಿಕೊಳ್ಳಬಹುದು. ಪಕ್ಷ ನಿಷ್ಠೆ ಎನ್ನುವುದು ಮರೀಚಿಕೆಯಾಗಿದೆ. ಹಣದ ನಿಷ್ಠೆ ಎನ್ನುವುದೊಂದೇ ಉಳಿದಿದೆ . ಹಣ ತೆಗೆದುಕೊಂಡು ಮತ ಚಲಾಯಿಸುವವರು ಇವರಾದರೆ ವಿಧಾನ ಮಂಡಲದ ಸದಸ್ಯತನಕ್ಕಾಗಿ ಇಷ್ಟೊಂದು ಹಣ ಕೊಟ್ಟು ಏಕೆ ಜಯಿಸಲೆತ್ನಿಸುತ್ತಾರೆ ಎಂದು ಚಿಂತಿಸಬೇಕು. ಸ್ಪರ್ಧಿಗಳು ಸೇವಾ ಮನೋಭಾವದವರಾದರೆ ತಮ್ಮ ಪ್ರಣಾಳಿಕೆಯನ್ನು ಆಧಾರವಾಗಿಟ್ಟು ಮತ ಯಾಚಿಸುತ್ತಾರೆ. “ಮತಕೊಡುವುದಾದರೆ ಕೊಡಿ ಇಲ್ಲವಾದರೆ ಬೇಡ,ಗೆದ್ದರೆ ಸೇವೆ ಸಲ್ಲಿಸುತ್ತೇನೆ” ಎನ್ನುತ್ತಾರಲ್ಲದೆ ಹೀಗೆ ಹಣ ಕೊಟ್ಟು ಸದಸ್ಯನಾಗಲು ಆಗ್ರಹಿಸಲಾರರು. ಸೇವಾಕ್ಷೆÉÃತ್ರವಾಗಬೇಕಾದ ಈ ವೇದಿಕೆ ಇಂದು ವ್ಯಾಪಾರೀ ಕ್ಷೇತ್ರವಾಗಿದ್ದು ಉದ್ದಿಮೆಯಲ್ಲಿರುವಂತೆ ಹಣ ಹೂಡಿ ಸ್ಥಾನ ಪಡೆ, ಅನಂತರ ಆ ಸ್ಥಾನವನ್ನು ಉಪಯೋಗಿಸಿ ಹಣಮಾಡು, ಲಾಭ ಮಾಡು” ಎಂದು ಈ ಕ್ಷೇತ್ರದಲ್ಲೂ ಆಗಿದೆ. ಇಷ್ಟೊಂದು ಹಣ ಹೂಡಿ ಗೆಲ್ಲುವ ವ್ಯಕ್ತಿ ಪ್ರಾಮಾಣಿಕನಾಗಿರಲು ಸಾಧ್ಯವೇ ಇಲ್ಲ.ಇಷ್ಟೊಂದು ಖರ್ಚು ಮಾಡಿದ್ದನ್ನು ಮರಳಿ ಸಂಪಾದನೆ ಮಾಡುವ ಏಕೊದ್ದೇಶದಿಂದಲೇ ವರ್ತಿಸುತ್ತಿರುತ್ತಾನೆ. ಈ ರೀತಿ ಸದಸ್ಯತ್ವ ಪಡೆದವರಿಂದಲೇ ಮಂತ್ರಿಮAಡಲ ರಚನೆಯಾಗುತ್ತದೆ. ಮಂತ್ರಿಮAಡಲ, ಉಭಯ ಸದನಗಳ ಸದಸ್ಯರುಗಳು ಸೇರಿ ಶಾಸಕಾಂಗವಾಗುತ್ತಾರೆ. ಇಂತಹಾ ಶಾಸಕಾಂಗದ ಅಡಿಯಲ್ಲಿರುವ ಕಾರ್ಯಾಂಗ ಅಂದರೆ ಅಧಿಕಾರಿಗಳು ಭ್ರಷ್ಟರಲ್ಲದೆ ಇನ್ನೇನು ಆಗಲು ಸಾಧ್ಯ.? ನಾವು ಈ ಅಧಿಕಾರಿ ವರ್ಗದಿಂದ ಒಬ್ಬಿಬ್ಬರನ್ನು ಬೊಟ್ಟು ಮಾಡಿ ಅವರನ್ನು ಮಾತ್ರ ಭ್ರಷ್ಟರನ್ನುವುದರಿಂದ ಏನು ಸಾಧನೆಯಾಗುತ್ತದೆ.?

ಪಂಚಾಯತ್ ಸದಸ್ಯರಿಂದ ಪ್ರಾರಂಭಿಸಿ ಲೋಕಸಭಾ ಸದಸ್ಯರುಗಳು, ಮಂತ್ರಿಗಳವರೆಗಿನ ಪ್ರತಿಯೊಬ್ಬರೂ ಪ್ರತಿನಿಧಿಗಳಾಗುವ ಮೊದಲು ಎಷ್ಟು ಆಸ್ತಿ ಹೊಂದಿದ್ದರು?. ಪ್ರತಿನಿಧಿಗಳಾದ ನಂತರ ಎಷ್ಟು ಸಂಪತ್ತು ಹೊಂದಿದ್ದಾರೆ ಎಂದು ನಿಷ್ಪಕ್ಷಪಾತ ಅನ್ವೇಷಣೆ ನಡೆಸಿದರೆ ಭ್ರಷ್ಟಾಚಾರದ ಅಗಾಧತೆ ಬಯಲಾಗುತ್ತದೆ. ರಾಜನೇ ಭ್ರಷ್ಟಾಚಾರಿಯಾದ ನಂತರ ಆತನ ಕೈಗೆಳಗಿನವರನ್ನು ಧೂಷಿಸಿ ಫಲವೇನು?

ಇಂದು ಚುನಾವಣೆಗೆ ನಿಲ್ಲುವವರು, ಇಷ್ಟೊಂದು ಮೊತ್ತವನ್ನು ಖರ್ಚು ಮಾಡುವವರು ಇಷ್ಟೊಂದು ಹಣ ಖರ್ಚು ಮಾಡಲು ಅವರಿಗೆ ಹಣ ಎಲ್ಲಿಂದ ಬಂದಿದೆ ಎಂದು ಪರಿಶೀಲಿಸಿದರೆ ಅದರ ಕರಾಳ ಚಿತ್ರ ಇನ್ನೂ ಸ್ಪಷ್ಟವಾಗುತ್ತದೆ. ಭ್ರಷ್ಟಾಚಾರದ ಆಳ ಮನವರಿಕೆಯಾಗುತ್ತದೆ.

ಸರಕಾರಗಳು ಎಷ್ಟು ಭ್ರಷ್ಟ ಎನ್ನುವುದಕ್ಕೆ ಇತ್ತೀಚೆಗಿನ ವರದಿಯೊಂದು ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಸರಕಾರಿ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರು ಒಂದು ಸಂಘ ಕಟ್ಟಿಕೊಂಡು ಹೋರಾಟದ ಕಣಕ್ಕಿಳಿದಿದ್ದಾರೆ. “ತಮಗೆ ಶೇ.ನಲ್ವತ್ತು ಕಮೀಶನ್ ಬೇಕೆಂದು ಸರಕಾರದವರು ಹಠ ಹಿಡಿಯುತ್ತಿದ್ದಾರೆ. ಇಷ್ಟು ಕೊಟ್ಟು ನಾವೇನು ಕೆಲಸ ಮಾಡಲು ಸಾಧ್ಯ.ನಮಗೆ ಕಿರುಕುಳ ಹೆಚ್ಚಾಗಿದೆ.ಇದರಿಂದ ನಮ್ಮನ್ನು ರಕ್ಷಿಸಬೇಕು” ಎಂದು ಅವರು ಸಂಘಟಿತರಾಗಿ ರಂಗಕ್ಕಿಳಿದಿದ್ದಾರೆ. ಅವರ ಪ್ರಕಾರ ಮೊದಲು ಇಷ್ಟು ಕಮೀಶನ್ ಕೇಳುತ್ತಿರಲಿಲ್ಲ.ಆಗ ಕೇವಲ ಶೇ.೧೦ರಿಂದ ೧೫ರಷ್ಟು ಕೇಳುತ್ತಿದ್ದರು. ಈಗ ಈ ಬೇಡಿಕೆ ಹೆಚ್ಚಾಗಿದ್ದು, ಶೇ.೪೦ಕ್ಕೆ ತಲುಪಿದ್ದು ತಮಗೆ ಕಿರುಕುಳ ಸಹಿಸಲಸಾಧ್ಯವಾಗಿದೆ ಎಂದು ಬಹಿರಂಗವಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹಣಪಡೆದು ಮತ ಹಾಕುವ ಮತದಾರರು; ನೀರಿನಂತೆ ಹಣ ಚೆಲ್ಲಿ ಚುನಾವಣೆಯನ್ನು ಗೆಲ್ಲುವ ಮತ್ತು ಅನಂತರ ಮಂತ್ರಿ ಮತ್ತಿತರ ಸ್ಥಾನಗಳನ್ನು ಪಡೆಯುವವರು ಶಾಸಕಾಂಗವಾಗಿದ್ದು ಅವರ ನಿಯಂತ್ರಣದಲ್ಲಿ ಕಾರ್ಯಾಂಗ ಬರುವುದರಿಂದ ಆದೂ ಭ್ರಷ್ಟವಾಗಲೇ ಬೇಕು. ಇಂತಹಾ ಸಮಾಜದಲ್ಲಿ ಅಲ್ಲಿ ಇಲ್ಲಿ ಒಬ್ಬ ಅಧಿಕಾರಿಯನ್ನು, ವೈದ್ಯನನ್ನು ಹಿಡಿದು ಭ್ರಷ್ಟಾಚಾರವನ್ನು ಕೊನೆಗೊಳಿಸುತ್ತೇವೆಂದರೆ ಇಡೀ ಸಮುದ್ರವೇ ಕಲುಶಿತವಾದಾಗ ಅದರಲ್ಲಿನ ಒಂದು ಹನಿಯನ್ನು ತೆಗೆದುಕೊಂಡು ‘ಇದು ಕಲುಶಿತವಾಗಿದೆ” ಎಂದAತೆ. ಇದರಿಂದ ಸಮಸ್ಯೆ ಪರಿಹಾರವಾಗದು.

ಇಂದಿನ ವ್ಯಾಪಕವಾದ ಭ್ರಷ್ಟಾಚಾರಕ್ಕೆ ಕೊಳ್ಳುಬಾಕ ಸಂಸ್ಕೃತಿ ಕಾರಣವಾಗಿದ್ದು ಇಂದಿನ ಸಮಾಜವ್ಯವಸ್ಥೆ ಕಾರಣವಾಗಿದೆ. ಸಮಾಜದ ಆಮೂಲಾಗ್ರ ಬದಲಾವಣೆಯಾಗದೆ ಭ್ರಷ್ಟಾಚಾರ ಕೊನೆಗೊಳ್ಳದು. ಆದ್ದರಿಂದ ಭ್ರಷ್ಟಾಚಾರ ಕೊನೆಗೊಳ್ಳ ಬೇಕೆನ್ನುವವರು ಸಮಾಜದ ಆಮೂಲಾಗ್ರ ಬದಲಾವಣೆಗಾಗಿ ದುಡಿಯಬೇಕಲ್ಲದೆ ಅಲ್ಲಿ ಇಲ್ಲಿ ಯಾರೋ ಒಬ್ಬರನ್ನು ಹಿಡಿದು ಬೀಗುವುದಲ್ಲ. -ಇ.ರ. ದುರ್ಗಾ ಪ್ರಸಾದ್. ವೀರಾಜಪೇಟೆ.