*ಗೋಣಿಕೊಪ್ಪ, ಡಿ. ೨೩: ಮಳೆಯ ಕಾರಣವೊಡ್ಡಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಪುನರಾರಂಭಿಸದೆ ಇರುವುದರ ಬಗ್ಗೆ ತಿತಿಮತಿ ಭಾಗದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಕಾಮಗಾರಿ ಶೀಘ್ರವಾಗಿ ಆರಂಭಿಸದಿದ್ದಲ್ಲಿ ಸ್ಥಳೀಯರು ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

ಮೈಸೂರು - ಗೋಣಿಕೊಪ್ಪದ ರಾಜ್ಯ ಹೆದ್ದಾರಿಯಲ್ಲಿ ಸುಮಾರು ೯ ಕಿ.ಮೀ ವ್ಯಾಪ್ತಿಯ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಮೊದಲ ಹಂತದಲ್ಲಿ ೭.೫ ಕಿ.ಮೀ ರಸ್ತೆ ಡಾಂಬರೀಕರಣ ಪೂರ್ಣಗೊಂಡಿತು. ಮಳೆಯ ಕಾರಣದಿಂದ ತಿತಿಮತಿ - ಬಾಳುಮನಿ ಸೇತುವೆಯಿಂದ ಮುಂದುವರೆದು ೧.೫ ಕಿ.ಮೀ ವ್ಯಾಪ್ತಿಯ ರಸ್ತೆ ಡಾಂಬರೀಕರಣ ಸ್ಥಗಿತಗೊಂಡಿದೆ. ಕಾಮಗಾರಿ ಪುನರಾರಂಭಿಸಲು ಗುತ್ತಿಗೆದಾರ ವಿಳಂಬ ತೋರುತ್ತಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಎರಡೂ ಬದಿಗಳನ್ನು ಅಗಲೀಕರಣಗೊಳಿಸಿ, ಎರಡು ಮೋರಿಗಳನ್ನು ಸೇರಿದಂತೆ ರಸ್ತೆ ಡಾಂಬರೀಕರಣಗೊಳಿಸಲು ರೂ. ೧ ಕೋಟಿ ೪೦ ಲಕ್ಷ ಅನುದಾನದಲ್ಲಿ ಗುತ್ತಿಗೆದಾರ ಟೆಂಡರ್ ಪಡೆದುಕೊಂಡಿ ದ್ದರು. ಆದರೆ, ಎರಡು ಬದಿಗಳ ಅಗಲೀಕರಣ ಮತ್ತು ಮೋರಿ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಡಾಂಬರೀಕರಣ ಮಾಡುವ ಹಂತದಲ್ಲಿ ವಾಯುಭಾರ ಕುಸಿತದಿಂದ ಮಳೆ ಬಿದ್ದ ಕಾರಣದ ನೆಪವೊಡ್ಡಿ ಡಾಂಬರೀಕರಣ ಸ್ಥಗಿತ ಗೊಳಿಸಲಾಗಿತ್ತು. ಡಾಂಬರೀಕರಣ ಗೊಳ್ಳಬೇಕಾದ ೧.೫ ಕಿ.ಮೀ ರಸ್ತೆ ಹೊಂಡಬಿದ್ದು, ಸಂಪೂರ್ಣ ಹದಗೆಟ್ಟಿದೆ.

ಸಮೀಪದಲ್ಲೇ ಶಾಲೆ ಇರುವು ದರಿಂದ ಮಕ್ಕಳು ಈ ಮಾರ್ಗದಲ್ಲಿ ತೆರಳುವಾಗ ವಾಹನಗಳ ಅಡ್ಡಾದಿಡ್ಡಿ ಸಂಚಾರದಿAದ ಸಮಸ್ಯೆ ಯಾಗಿ ಕಾಡುತ್ತಿದೆ. ಪಾದಚಾರಿ ಗಳಿಗೂ, ಕೂಲಿ ಕಾರ್ಮಿಕರಿಗೂ ಈ ಸಮಸ್ಯೆ ತಪ್ಪಿದ್ದಲ್ಲ. ಗುತ್ತಿಗೆದಾರ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಲು ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

೧೦ ದಿನಗಳೊಳಗೆ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸದೇ ಇದ್ದರೆ ತಿತಿಮತಿ ಪಟ್ಟಣವನ್ನು ಬಂದ್ ಮಾಡಿ ತಾಲೂಕು ಲೋಕೋಪಯೋಗಿ ಇಲಾಖೆಯ ಕಚೇರಿಯ ಎದುರು ತೀವ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ರಸ್ತೆಗಳಲ್ಲಿ ಹೊಂಡ ಬಿದ್ದ ಕಾರಣ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಮಾರ್ಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಗುತ್ತಿಗೆದಾರರು ಕೂಡಲೇ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸುವ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾ.ಪಂ. ಸದಸ್ಯ ಅಫ್ರ‍್ರೋಸ್ ಒತ್ತಾಯಿಸಿದ್ದಾರೆ.

ರಸ್ತೆ ಡಾಂಬರೀಕರಣಕ್ಕೆ ಆಗಮಿಸುವ ಕಾರ್ಮಿಕರು ಮತ್ತು ಯಂತ್ರಚಾಲಕರು ಹೊರ ರಾಜ್ಯದವ ರಾಗಿದ್ದಾರೆ. ಕೋವಿಡ್ ನಿಯಮದಿಂದ ತಕ್ಷಣಕ್ಕೆ ರೈಲು ಸಂಚಾರ ಸಾಧ್ಯವಾಗುತ್ತಿಲ್ಲ. ಕೋವಿಡ್‌ನ ಕೆಲವು ನಿರ್ಬಂಧನೆಗಳಿAದ ಕಾರ್ಮಿಕರ ಆಗಮನಕ್ಕೆ ಸಾಧ್ಯವಾಗುತ್ತಿಲ್ಲ. ರೈಲುಗಳು ಪೂರ್ಣ ಭರ್ತಿಯಾಗಿರುವುದರಿಂದ ತಕ್ಷಣಕ್ಕೆ ಟಿಕೆಟ್ ದೊರೆಯುತ್ತಿಲ್ಲ. ಇವೆಲ್ಲಾ ಸಮಸ್ಯೆಗಳಿಂದ ಡಾಂಬರೀಕರಣ ಪ್ರಾರಂಭಿಸಲು ವಿಳಂಬವಾಗುತ್ತಿದೆ ಎಂದು ಗುತ್ತಿಗೆದಾರ ದಿನೇಶ್ ತಿಳಿಸಿದ್ದಾರೆ.

-ಎನ್.ಎನ್. ದಿನೇಶ್.