ಮಡಿಕೇರಿ, ಡಿ. ೨೩: ದೇಶದ ಅಭಿವೃದ್ಧಿಯಲ್ಲಿ ಕೃಷಿಕರ ಪಾತ್ರ ಪ್ರಮುಖವಾದದ್ದು ಎಂದು ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅಭಿಮತ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ಕೊಡಗು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಮತ್ತು ಮಡಿಕೇರಿ ತಾಲೂಕು ಕೃಷಿಕ ಸಮಾಜದ ಸಂಯುಕ್ತಾಶ್ರಯದಲ್ಲಿ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದ್ದ ರೈತರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕತೆ ಹೆಚ್ಚಾದಂತೆ ಯುವ ಪೀಳಿಗೆ ಕೃಷಿಯತ್ತ ಒಲವು ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಾಲಾ ಪಠ್ಯದಲ್ಲೇ ಕೃಷಿ ವಿಷಯಗಳನ್ನು ಅಳವಡಿಸುವ ಮೂಲಕ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ನೀಡಿರುವ ಸವಲತ್ತುಗಳನ್ನು ಚಾಚೂ ತಪ್ಪದೆ ರೈತರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿ ವರ್ಗ ಮಾಡಬೇಕೆಂದು ಅನಿತಾ ಪೂವಯ್ಯ ಸಲಹೆಯಿತ್ತರು. ಕೃಷಿಯಿಂದ ಅಂತರ್ಜಲಮಟ್ಟ ಹೆಚ್ಚಿಸಬಹುದಾಗಿದೆ. ಕೃಷಿ ಭೂಮಿಯನ್ನು ಕಟ್ಟಡಗಳಾಗಿ ಪರಿವರ್ತನೆ ಮಾಡುವುದರಿಂದ ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಅನಿತಾ ಪೂವಯ್ಯ ಹೇಳಿದರು.

ಕೃಷಿ ಸಂಶೋಧನಾ ಕೇಂದ್ರದ ತಜ್ಞರಾದ ಡಾ. ಬಸವಲಿಂಗಯ್ಯ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಹಂತದಲ್ಲೇ ಕೃಷಿ ಬಗ್ಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಪ್ರೌಢಶಾಲೆ ಅಥವಾ ಕಾಲೇಜು ಪಠ್ಯಗಳಲ್ಲಿ ಕೃಷಿ ಸಂಬAಧಿತ ವಿಷಯ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ರೈತ ದಿನಾಚರಣೆ ಅಂಗವಾಗಿ ಡ್ರಂ ಸೀಡರ್‌ನಿಂದ ಬಿತ್ತಿದ ಭತ್ತದ ಬೆಳೆಯ ಕ್ಷೇತ್ರೋತ್ಸವದ ಬಗ್ಗೆ ಮಾತನಾಡಿದ ಬಸವಲಿಂಗಯ್ಯ ಅವರು, ಈ ಪದ್ಧತಿಯಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆಯಬಹುದು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಅಜ್ಜಿಕುಟ್ಟಿರ ಗಿರೀಶ್, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ‘ರೈತರಿಲ್ಲದೆ ಕೃಷಿ ಇಲ್ಲ. ಕೃಷಿ ಇಲ್ಲದೆ ದೇಶವಿಲ್ಲ’ ಎಂಬ ಧ್ಯೇಯ ವಾಕ್ಯದಡಿ ರೈತರಿಗೆ ಒಳಿತಾಗುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅವರ ಜ್ಞಾಪಕಾರ್ಥವಾಗಿ ಅವರ ಜನ್ಮದಿನವನ್ನು ರೈತರ ದಿನವೆಂದು ಆಚರಿಸಲಾಗುತ್ತಿದೆ ಎಂದು ಹೇಳಿದರು. ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧನಲಕ್ಷಿö್ಮ ಅವರು ರೈತರಿಗೆ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಸಂದೇಶ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ನಾಪಂಡ ರ‍್ಯಾಲಿ ಮಾದಯ್ಯ ಮಾತನಾಡಿ, ರೈತರ ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಯೋಜನೆ ಮತ್ತು ಸೌಲಭ್ಯಗಳನ್ನು ಸಂಬAಧಿಸಿದ ಅಧಿಕಾರಿಗಳು ರೈತರಿಗೆ ತಲುಪಿಸು ವಂತಾಗಬೇಕು ಎಂದರು. ಸಂತ ಮೈಕಲರ ಶಾಲೆ ವಿದ್ಯಾರ್ಥಿನಿಯರು ರೈತ ಗೀತೆ ಹಾಡಿದರು. ಲತಾ ಕುಮಾರಿ ನಿರೂಪಿಸಿ, ಧೃತಿ ಪ್ರಾರ್ಥಿಸಿದರು. ಇಂದಿರಾ ವಂದಿಸಿದರು.