ಕೊಡ್ಲಿಪೇಟೆ,ಡಿ.೨೩: ಕೊಡ್ಲಿಪೇಟೆ ಗ್ರಾ. ಪಂ.ಯಲ್ಲಿ ಲೆಕ್ಕ

ಸಹಾಯಕಿ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯೋರ್ವರು ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಈ ಪ್ರಯತ್ನಕ್ಕೂ ಮುನ್ನ ತಮ್ಮ ಹೇಳಿಕೆಗಳನ್ನು ಮೊಬೈಲ್ ವೀಡಿಯೋ ಮೂಲಕ ಚಿತ್ರೀಕರಿಸಿದ್ದು, ಇದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಕೆಲ ಸಮಯದಲ್ಲಿ ಕಚೇರಿಯಲ್ಲೇ ವಿಷ ಸೇವಿಸಿದ್ದಾರೆ.

ಮೂಲತಃ ಕರ‍್ಲಳ್ಳಿ ನಿವಾಸಿ, ಕಳೆದ ೬ ತಿಂಗಳಿನಿAದ ಸೋಮವಾರ ಪೇಟೆ ಪಟ್ಟಣದ ರೇಂಜರ್ ಬ್ಲಾಕ್ ಸಮೀಪ ಬಾಡಿಗೆ ಮನೆ ಮಾಡಿ ಕೊಂಡು ವಾಸವಿರುವ, ಕೊಡ್ಲಿಪೇಟೆ ಗ್ರಾ.ಪಂ.ನಲ್ಲಿ ಲೆಕ್ಕಸಹಾಯಕಿಯಾಗಿದ್ದ ಹರಿಣಿ (೩೪) ಎಂಬವರೇ ವಿಷ ಸೇವನೆ ಮಾಡಿ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದವರು.

ಘಟನೆ ಹಿನ್ನೆಲೆ: ಇಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿದ್ದು, ಗ್ರಾ.ಪಂ. ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಲತಾ, ಬಿಲ್ ಕಲೆಕ್ಟರ್ ದೀಪು ಹಾಗೂ ಲೆಕ್ಕಸಹಾಯಕಿ ಹರಿಣಿ ಅವರುಗಳಿದ್ದರು. ಮಧ್ಯಾಹ್ನ ಲತಾ ಹಾಗೂ ದೀಪು ಅವರು ಊಟಕ್ಕೆಂದು ಮನೆಗೆ ತೆರಳಿದ ಸಂದರ್ಭ, ಹರಿಣಿ ಅವರು ವಿಷಪ್ರಾಶನ ಮಾಡಿದ್ದಾರೆ.

ನಂತರ ಹೊಟ್ಟೆನೋವು ತಡೆಯಲಾರದೇ ಕಂಪ್ಯೂಟರ್ ಆಪರೇಟರ್ ಲತಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಕ್ಷಣ ತಮ್ಮ ತಂದೆ

(ಮೊದಲ ಪುಟದಿಂದ) ಸುರೇಶ್ ಅವರೊಂದಿಗೆ ಕಚೇರಿಗೆ ಆಗಮಿಸಿದ ಅವರು, ನೆಲದಲ್ಲಿ ಬಿದ್ದಿದ್ದ ಹರಿಣಿ ಅವರನ್ನು ಕೊಡ್ಲಿಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಮಂಗಳ ಆಸ್ಪತ್ರೆಗೆ ಸಾಗಿಸಿದ್ದಾರೆ. ರೋಗಿಯ ಸ್ಥಿತಿ ಗಂಭೀರವಾಗಿದ್ದು, ಸದ್ಯಕ್ಕೆ ಏನೂ ಹೇಳಲಾಗದು ಎಂದು ವೈದ್ಯರು ತಿಳಿಸಿರುವ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ವೀಡಿಯೋದಲ್ಲಿ ಅಸಹಾಯಕತೆ: ವಿಷ ಸೇವಿಸುವುದಕ್ಕೂ ಮುನ್ನ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ವೀಡಿಯೋ ಮಾಡಿದ್ದು, ಈ ತುಣುಕನ್ನು ಮಾಧ್ಯಮ ಪ್ರತಿನಿಧಿಗಳಿಗೆ ಕಳುಹಿಸಿದ್ದಾರೆ. ಇದರಲ್ಲಿ ಗ್ರಾಮ ಪಂಚಾಯಿತಿಯ ಕೆಲ ವಾಟರ್‌ಮೆನ್‌ಗಳ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ.

“ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ತಾತ್ಕಾಲಿಕ ವಾಟರ್‌ಮೆನ್‌ಗಳಾದ ವೀರಭದ್ರ, ವಸಂತ, ತ್ಯಾಗರಾಜ್ ಎಂಬವರುಗಳು ಕಿರುಕುಳ ನೀಡುತ್ತಿದ್ದಾರೆ. ತಾ.೨೦ರಂದು ವೀರಭದ್ರ ಎಂಬ ವಾಟರ್‌ಮೆನ್ ಅವಾಚ್ಯ ಶಬ್ದಗಳಿಂದ ಸಾರ್ವಜನಿಕರ ಎದುರು ನಿಂದಿಸಿದ್ದಾನೆ. ಇವನ ಮಕ್ಕಳೂ ಸಹ ಅವಾಚ್ಯವಾಗಿ ನಿಂದಿಸಿದ್ದಾರೆ. ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ; ಮೂವರು ವಾಟರ್‌ಮೆನ್‌ಗಳಿಂದ ಮಾನಸಿಕ ಕಿರಿಕಿರಿಯಾಗುತ್ತಿದೆ; ನನ್ನ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ.’’

“ಈ ಬಗ್ಗೆ ಪಿಡಿಓ, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಇವರಿಂದಾಗಿ ಕಚೇರಿಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಈ ರೀತಿಯ ವರ್ತನೆಯಿಂದ ನೊಂದಿದ್ದೇನೆ. ಈ ವಿಚಾರವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತುಂಬಾ ನೋವಾಗಿದೆ; ಹಿಂಸೆಯಾಗಿದೆ.

ಯಾರತ್ರ ಹೇಳ್ಕೊಬೇಕೋ ಗೊತ್ತಿಲ್ಲ. ಓರ್ವ ಸರ್ಕಾರಿ ಮಹಿಳಾ ನೌಕರಳಾಗಿರುವ ತನಗೆ ಇಷ್ಟೊಂದು ಹಿಂಸೆಯಾಗುತ್ತಿದೆ. ಯಾರು ರಕ್ಷಣೆ ಕೊಡುತ್ತಾರೆ? ಹೇಗೆ ಕೆಲಸ ಮಾಡಬೇಕೋ ಗೊತ್ತಿಲ್ಲ. ಮನಸ್ಸಿಗೆ ತುಂಬಾ ಹಿಂಸೆಯಾಗುತ್ತಿದೆ” ಎಂದು ಸೆಲ್ಫಿ ವೀಡಿಯೋ ಮಾಡಿದ್ದು, ಇದನ್ನು ಮಾಧ್ಯಮ ಪ್ರತಿನಿಧಿಗಳಿಗೆ ಕಳುಹಿಸಿದ್ದಾರೆ.