ಮಡಿಕೇರಿ, ಡಿ. ೨೩: ಗ್ರಾಮ ಪಂಚಾಯಿತಿ ಪಿ.ಡಿ.ಓ ಹಾಗೂ ಅಧ್ಯಕ್ಷರ ಇಚ್ಛಾಶಕ್ತಿಯ ಕೊರತೆಯಿಂದ ಚೆಟ್ಟಳ್ಳಿ ಗ್ರಾಮದ ವಿವಿಧ ಸಮಸ್ಯೆಗಳು ಪರಿಹಾರವಾಗಿಲ್ಲ. ಒಂದು ವರ್ಷದಿಂದ ಗ್ರಾಮಸಭೆ ಹಾಗೂ ವಾರ್ಡ್ ಸಭೆ ನಡೆಸಿಲ್ಲ. ಈ ಬಗ್ಗೆ ೧೫ ದಿನಗಳೊಳಗೆ ಸರಿಯಾದ ಕ್ರಮಕೈಗೊಳ್ಳದಿದ್ದಲ್ಲಿ ಪಂಚಾಯ್ತಿಗೆ ಮುತ್ತಿಗೆ ಹಾಕಲಾಗುವುದು ಎಂದು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಬಲ್ಲ್ಲಾರಂಡ ಮಣಿ ಉತ್ತಪ್ಪ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳಿವೆ. ಅಭಿವೃದ್ಧಿ ಕಾರ್ಯ ಮಾಡುವಲ್ಲಿ ಗ್ರಾ.ಪಂ. ಸಂಪೂರ್ಣ ವೈಫಲ್ಯ ಕಂಡಿದೆ. ಅಧ್ಯಕ್ಷರ ಹಾಗೂ ಅಭಿವೃದ್ಧಿ ಅಧಿಕಾರಿಯ ಬದ್ಧತೆ ಕೊರತೆಯಿಂದ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ನಿವೇಶನ ರಹಿತರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಗ್ರಾ.ಪಂ ಕ್ರಮಕೈಗೊಂಡಿಲ್ಲ, ಪಿಡಿಓ ಶಿಸ್ತು ಪಾಲಿಸುತ್ತಿಲ್ಲ. ಕಚೇರಿಗೆ ಸರಿಯಾಗಿ ಆಗಮಿಸುತ್ತಿಲ್ಲ. ಇದರಿಂದ ಸಾಮಾನ್ಯ ಜನರಿಗೆ ಸಮಸ್ಯೆಯಾಗಿದೆ ಎಂದು ದೂರಿದರು.

ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕಸವಿಲೇವಾರಿ ಸಮಸ್ಯೆ ಉಲ್ಭಣಿಸುತ್ತಿದೆ. ತೋಡಿಗೆ ಕಸಹಾಕುತ್ತಿರುವ ಪರಿಣಾಮ ಜಲಮೂಲ ಕಲುಷಿತಗೊಂಡಿದೆ. ಕಸವಿಲೇವಾರಿ ವಾಹನವಿದ್ದರೂ ಇನ್ನೂ ಚಾಲಕನನ್ನು ನೇಮಿಸಿಲ್ಲ. ಸಾರ್ವಜನಿಕರ ಸಮಸ್ಯೆಗೆ ಸರಿಯಾದ ಸ್ಪಂದನ ಸಿಗುತ್ತಿಲ್ಲ. ಗ್ರಾಮದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ದುರುಪಯೋಗವಾಗುತ್ತಿದೆ. ನಿರ್ಮಾಣವಾಗದ ಇಂಗುಗುAಡಿಗೆ ಬಿಲ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಈ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿದರು.

ಒಂದು ವರ್ಷ ಕಳೆದರೂ ಇಂದಿಗೂ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಯನ್ನು ನಡೆಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಣಿ ಉತ್ತಪ್ಪ, ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಲಿಖಿತ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಎನ್.ಎಸ್. ರವಿ, ಧನಂಜಯ ಇದ್ದರು.