ಮಡಿಕೇರಿ, ಡಿ. ೨೦: ಪ್ರಜಾ ಪ್ರಕಾಶನ ಆಯೋಜಿಸಿದ್ದ ಆರ್.ಜಯಕುಮಾರ್ ಸಂಪಾದಕತ್ವದ ‘ತುಳು-ಕೊಡವ ಭಾಷೆಗಳ ಅಳಿವು ಉಳಿವು’ ಪುಸ್ತಕ (ಬಿ.ಕೆ ಹರಿಪ್ರಸಾದ್ ಅವರ ಸಂಸತ್ ಭಾಷಣಗಳು ಭಾಗ-೧) ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಡಾ.ಪುರುಷೋತ್ತಮ ಬಿಳಿಮಲೆ, ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸಿರುವುದಾಗಿ ೨೦೧೧ರ ಜನಗಣತಿ ಹೇಳುತ್ತದೆ. ಇದೇ ರೀತಿ ಮುಂದುವರಿದರೆ ಭಾಷೆ ಮಾತನಾಡುವವರೇ ಇಲ್ಲವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು. ದೇಶದಲ್ಲಿರುವ ೧೯,೫೬೯ ಭಾಷೆಗಳನ್ನು ಉಳಿಸಲು ಸಮಗ್ರ ಭಾಷಾ ನೀತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ ಕೊಡವರು ವೈದಿಕ ಸಂಪ್ರದಾಯ ಆಚರಿಸುವುದಿಲ್ಲ ಹಾಗೂ ಜಾತಿ ಭೇದ ಎನ್ನುವುದೇ ಇಲ್ಲ. ರಾಜಕೀಯ ಬೆನ್ನೆಲುಬು ಇಲ್ಲದೆ ಹೋದರೆ ಕೊಡವ ಭಾಷೆ ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರುವುದು ಕಷ್ಟ ಎಂದರು. ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ಮಾತನಾಡಿ, ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಅದನ್ನು ಕಳೆದುಕೊಂಡರೆ ಪಟೇಲರು, ಜಮೀನ್ದಾರರು ಮಾತ್ರ ಇರುತ್ತಾರೆ. ಉಳಿದವರು ಕೂಲಿಕಾರ್ಮಿಕರಾಗಿ ಉಳಿಯುತ್ತಾರೆ ಎಂದರು. ಕೊಡವ ನ್ಯಾಷನಲ್ ಕೌನ್ಸಿಲ್‌ನ ಅಧ್ಯಕ್ಷ ಎನ್.ಯು ನಾಚಪ್ಪ ಮಾತನಾಡಿ ಕೆಲವರು ಪೂರ್ವಗ್ರಹ ಪೀಡಿತರಾಗಿ ಕೊಡವರನ್ನು ದೇಶದ್ರೋಹಿಗಳೆಂದು ಕರೆದರು. ಕೊಡವ ಸಮುದಾಯವನ್ನು ನಿರ್ನಾಮ ಮಾಡುವ ಹುನ್ನಾರಗಳು ನಡೆಯುತ್ತಿರುವುದಾಗಿ ಕಳವಳ ವ್ಯಕ್ತಪಡಿಸಿದರು.
ತುಳು ಕೊಡವ ಭಾಷೆಗಳನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವ ಸಂಬAಧ ಸರಕಾರವನ್ನು ಒತ್ತಾಯಿಸಲು ಸಭೆಯಲ್ಲಿ ತೀರ್ಮಾನವಾಯಿತು.