ಮಡಿಕೇರಿ, ಡಿ. ೧೯ : ತಾವು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಳ್ಳುವ ಅವಕಾಶ ದೊರೆತಿದ್ದು, ಅದೃಷ್ಟದ ಕಾರಣದಂತಿದೆ. ದೊರೆತ ಈ ಆರು ವರ್ಷಗಳ ಅಧಿಕಾರಾವಧಿಯ ಸಂದರ್ಭದಲ್ಲಿ ಎದುರಾದ ಹಲವು ಅಡೆ - ತಡೆಗಳ ನಡುವೆ ಜವಾಬ್ದಾರಿಯುತವಾಗಿ ಜಿಲ್ಲೆಗೆ - ಜಿಲ್ಲೆಯ ಜನತೆಗೆ ಸ್ಪಂದಿಸಿ ಕೆಲಸ ನಿರ್ವಹಿಸಿರುವ ಆತ್ಮ ತೃಪ್ತಿ ಇರುವುದಾಗಿ ಇದೀಗ ಸ್ಥಾನದಿಂದ ನಿವೃತ್ತರಾಗುತ್ತಿರುವ ಎಂ.ಎಲ್.ಸಿ. ಎಂ.ಪಿ. ಸುನಿಲ್ ಸುಬ್ರಮಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಶಕ್ತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಆರು ವರ್ಷಗಳ ಅನುಭವ - ಸಾಧನೆಯ ಕುರಿತಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ತಾವು ಚುನಾಯಿತರಾದ ಸಂದರ್ಭ ವಿಪಕ್ಷದ ಸದಸ್ಯರಾಗಿ ಕೆಲಸ ನಿರ್ವಹಿಸಬೇಕಾಯಿತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದರು. ಆರಂಭಿಕವಾಗಿ ತಾವು ಕೊಡಗಿನ ಜನತೆಗೆ ಬೇಡವಾಗಿದ್ದ ಟಿಪ್ಪು ಜಯಂತಿಯ ವಿರುದ್ಧವಾಗಿ ಹೋರಾಟ ನಡೆಸಬೇಕಾಯಿತು. ವಿಪಕ್ಷನಾಯಕರುಗಳಾಗಿದ್ದ ಕೆ.ಎಸ್. ಈಶ್ವರಪ್ಪ, ಕೋಟಾಶ್ರೀನಿವಾಸ್ ಪೂಜಾರಿ ಅವರುಗಳ ಸಹಕಾರದ ಮೂಲಕ ಆರಂಭಿಕ ಹೋರಾಟ ಟಿಪ್ಪು ಜಯಂತಿ ವಿರುದ್ಧ ಅನಿವಾರ್ಯವಾಗಿತ್ತು ಎಂದು ಅವರು ಸ್ಮರಿಸಿದರು.

ನಂತರದಲ್ಲಿ ಎರಡು ವರ್ಷಗಳು ಎದುರಾದದ್ದು ಕೊಡಗು ಜಿಲ್ಲೆ ಕಂಡು - ಕೇಳರಿಯದ ಪ್ರಾಕೃತಿಕ ದುರಂತವಾಗಿತ್ತು. ಈ ಅನಾಹುತವನ್ನು ಎದುರಿಸುವಲ್ಲಿ ಅಪಾರ ಪರಿಶ್ರಮ ಪಡುವಂತಾಗಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ. ಕುಮಾರಸ್ವಾಮಿ, ಅವರ ಸಹಕಾರ, ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸರಕಾರದ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್, ಕಂದಾಯ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಅವರುಗಳ ಸ್ಪಂದನವನ್ನೂ ಸ್ಮರಿಸಿದ ಸುನಿಲ್ ಆ ಸಂದರ್ಭ ಜಿಲ್ಲಾ ಕೇಂದ್ರದಲ್ಲೇ ಇದ್ದುಕೊಂಡು ಕೆಲಸ ನಿರ್ವಹಿಸಿದ ಅನುಭವವನ್ನು ಮೆಲುಕು ಹಾಕಿದರು. ಇದಾದ ನಂತರದಲ್ಲಿ ಕೋವಿಡ್‌ನ ಸಮಸ್ಯೆ ತಲೆದೋರಿತು.

ಈ ಸಂದರ್ಭದಲ್ಲಿ ಆರಂಭದಲ್ಲಿ ತಮ್ಮ ಸರಕಾರವಿರದಿದ್ದರೂ ಪರಿಸ್ಥಿತಿ ಎದುರಿಸಿದ ಕುರಿತು ಅವರು ತೃಪ್ತಿ ವ್ಯಕ್ತಪಡಿಸಿದರು.

(ಮೊದಲ ಪುಟದಿಂದ) ಜಿಲ್ಲೆಯ ಇಬ್ಬರು ಶಾಸಕರನ್ನು ಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಿದ್ದೇನೆ. ಇವರ ಸಹಕಾರದೊಂದಿಗೆ ಹಾಗೂ ನಂತರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ, ಸಂಬAಧಿಸಿದ ಸಚಿವರ ಸಹಕಾರ ದೊರೆಯಿತು. ಇದರಂತೆ ಜಿಲ್ಲೆಯ ಎಲ್ಲಾ ೧೦೪ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಸಾಧ್ಯವಾದಷ್ಟು ಮಟ್ಟಿಗೆ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ.

ಗ್ರಾ.ಪಂ. ಅಧ್ಯಕ್ಷರ, ಸದಸ್ಯರ ಗೌರವಧನ ಹೆಚ್ಚಳ, ಗ್ರಂಥಪಾಲಕರ ವೇತನ ಹೆಚ್ಚಳ ಬೇಡಿಕೆಗೆ ಸ್ಪಂದಿಸಿದ್ದು, ಓರ್ವ ಎಂಎಲ್‌ಸಿಗೆ ಸಿಗುವ ಕನಿಷ್ಟ ಅನುದಾನವಾದ ರೂ. ೨ ಕೋಟಿಗಿಂತ ಹೆಚ್ಚು ಅನುದಾನವನ್ನು ಸ್ವಪ್ರಯತ್ನದ ಮೂಲಕ ತಂದು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಿರುವುದು ತಮಗೆ ತೃಪ್ತಿ ನೀಡಿದೆ ಎಂದು ಅವರು ಹೇಳಿದರು. ಮೇಲ್ಮನೆ ಸದಸ್ಯರಿಗೆ ಅವರದ್ದೇ ಸರಕಾರ ಅಧಿಕಾರದಲ್ಲಿದ್ದರೆ ಅದು ಜನಪರ ಕೆಲಸ ಮಾಡಲು ಒಂದಷ್ಟು ಅನುಕೂಲಕರವಾಗಲಿದೆ. ವಿಪಕ್ಷವಾದಲ್ಲಿ ತುಸು ಕಷ್ಟ ಎಂಬದು ತಮ್ಮ ಅನುಭವ ಎಂದು ಅವರು ಹೇಳಿದರು.

ಜಿಲ್ಲೆಗೆ ಸಂಬAಧಿಸಿದAತೆ ಪ್ರತಿಕ್ರಿಯಿಸಿದ ಅವರು ಕೃಷಿ ಪ್ರಧಾನವಾದ ಈ ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿಯಂತಹ ಕಾರಣಗಳಿಂದಾಗಿ ರೈತರ ಬದುಕು ದುಸ್ತರವಾಗುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯ ಯೋಜನೆ - ಸಹಕಾರಗಳು ಜಿಲ್ಲೆಗೆ ಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಚುನಾವಣೆ ಕುರಿತು...

ಹಿಂದಿನ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಕಡಿಮೆ ಇದ್ದ ಸನ್ನಿವೇಶದಲ್ಲಿ ಅದೃಷ್ಟದ ರೀತಿಯಲ್ಲಿ ಅನಿರೀಕ್ಷಿತವಾಗಿ ತಮಗೆ ಟಿಕೆಟ್ ದೊರೆತಿತ್ತು. ಇದರಲ್ಲಿ ಜಯಗಳಿಸಿದ್ದು, ನಂತರದಲ್ಲಿ ಎಲ್ಲರ ವಿಶ್ವಾಸ ಪಡೆದು ಕೆಲಸ ನಿರ್ವಹಿಸಿದ್ದೇನೆ. ಎಲ್ಲೂ ದ್ವೇಷದ ರಾಜಕಾರಣ ಮಾಡಲಿಲ್ಲ. ಮುಖ್ಯವಾಗಿ ವಿಧಾನ ಪರಿಷತ್ ಸದಸ್ಯರಿಗೆ ಅವರು ಹೊಂದಿರುವ, ಬಾಂಧವ್ಯ ಅನುಕೂಲಕರವಾಗುತ್ತದೆ ಎಂದರು. ತಮ್ಮ ಪ್ರತಿಸ್ಪರ್ಧಿಯಾಗಿದ್ದ ಚಂದ್ರಮೌಳಿ ಅವರೊಂದಿಗೆ ನಂತರದಲ್ಲೂ ಉತ್ತಮ ಬಾಂಧವ್ಯ ಮುಂದುವರಿದಿತ್ತು ಎಂದು ಅವರು ಉಲ್ಲೇಖಿಸಿದರು.

೧೯೮೬ ರಿಂದ ಪಕ್ಷದ ವಿವಿಧಸ್ತರಗಳಲ್ಲಿ, ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದೇನೆ. ತಮ್ಮ ಮುಂದಿನ ನಡೆಯ ಕುರಿತೂ ಪಕ್ಷ ಕೈಗೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿರುವದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಬಾರಿಯ ಚುನಾವಣೆ ಕುರಿತಾಗಿ...

ತಾವು ಸ್ಪರ್ಧಿಸಿದ ಸಂದರ್ಭ ಕೇವಲ ಮೂವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಈ ಬಾರಿ ೧೬ ಮಂದಿ ಇದ್ದರು. ಕಳೆದ ಬಾರಿ ಟಿಕೆಟ್ ದೊರೆತರೂ ಕಾನೂನಿನ ತೊಡಕಿನಿಂದ ಅವಕಾಶ ವಂಚಿತರಾಗಿದ್ದ ಸುಜಾಕುಶಾಲಪ್ಪ ಅವರು ಈ ಬಾರಿ ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷ ಅವರಿಗೆ ಅವಕಾಶ ನೀಡಿದ್ದು, ತಾವು ಇದಕ್ಕೆ ಬದ್ಧರಾಗಿ ನಡೆದುಕೊಂಡಿರುವದಾಗಿ ಸುನಿಲ್ ಸುಬ್ರಮಣಿ ಪ್ರತಿಕ್ರಿಯಿಸಿದರು.

ಎಂಎಲ್‌ಸಿ ಚುನಾವಣೆಗೂ ಸಾರ್ವತ್ರಿಕ ಚುನಾವಣೆಗೂ ವ್ಯತ್ಯಾಸವಿದೆ. ತಂತ್ರಗಳು... ಪ್ರತಿ ತಂತ್ರಗಳು ಇದ್ದೇ ಇರುತ್ತದೆ. ಬಿಜೆಪಿ ತನ್ನ ಕೆಲಸ ಮಾಡಿದ್ದರೆ, ಕಾಂಗ್ರೆಸ್ ಅವರ ಕೆಲಸ ಮಾಡಿದ್ದು, ಇದು ಸಹಜವೂ ಆಗಿದೆ. ಮತಗಳು ಸ್ವಲ್ಪ ಕಡಿಮೆಯಾಗಿರುವುದು ಇದೇ ಕಾರಣದಿಂದಾಗಿದೆ. ಇದರ ಬಗ್ಗೆ ಪಕ್ಷ ಹಾಗೂ ಪಕ್ಷದ ಜಿಲ್ಲಾ ಅಧ್ಯಕ್ಷರು ಅವಲೋಕಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಇದು ಪಕ್ಷದ ವಿಚಾರ ಎಂದು ಅವರು ಮತಗಳು ಕಡಿಮೆಯಾಗಿರುವ ಬಗ್ಗೆ ಹೇಳಿದರು. ಫಲಿತಾಂಶವನ್ನು ಹೇಳಿಕೊಂಡು ಕಾಂಗ್ರೆಸ್ ತಮಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಎಂಎಲ್‌ಸಿ ಚುನಾವಣೆಗೂ, ಸಾರ್ವತ್ರಿಕ ಚುನಾವಣೆಗೂ ವ್ಯತ್ಯಾಸವಿದೆ. ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಿಯೇ ಇದೆ ಎಂದು ಅವರು ಅಭಿಪ್ರಾಯಪಟ್ಟರು. - ಶಶಿ ಸೋಮಯ್ಯ