ಸೋಮವಾರಪೇಟೆ, ಡಿ.೧೯: ಕಾಫಿ ಬೆಳೆಗಾರರ ೧೦ ಹೆಚ್.ಪಿ.ವರೆಗಿನ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಬೇಕು, ಹಿಂದಿನ ಬಾಕಿ ದಂಡವನ್ನು ಮನ್ನಾ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಯೊಂದಿಗೆ ಇತರ ಸಮಸ್ಯೆಗಳನ್ನು ನಿವಾರಿಸುವಂತೆ ರಾಜ್ಯ ರೈತ ಸಂಘದ ಜಿಲ್ಲೆ ಹಾಗೂ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ೭ದಿನ ಪೂರೈಸಿದೆ.

ಈ ನಡುವೆ ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ತನ್ನ ಗಮನಕ್ಕೆ ಬಂದಿದ್ದು, ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.

ಸೋಮವಾರಪೇಟೆಯ ಜೇಸೀ ವೇದಿಕೆಯಲ್ಲಿ ರೈತ ಸಂಘದಿAದ ನಡೆಯುತ್ತಿರುವ ಧರಣಿ ತನ್ನ ಗಮನಕ್ಕೆ ಬಂದಿದೆ. ಈಗಾಗಲೇ ರೈತ ಮುಖಂಡರು ಬೇಡಿಕೆಗಳ ಪಟ್ಟಿಯನ್ನು ನೀಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಮಾತು ಕತೆಯನ್ನೂ ನಡೆಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಕಾಫಿ ಬೆಳೆಗಾರರು ಮುಂದಿಟ್ಟಿರುವ ೧೦ ಹೆಚ್.ಪಿ. ವರೆಗಿನ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂಬ ಪ್ರಮುಖ ಬೇಡಿಕೆಯ ಬಗ್ಗೆ ಕಳೆದ ತಾ. ೧೬ರಂದು ರಾಜ್ಯ ಇಂಧನ ಸಚಿವ ಸುನಿಲ್‌ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ವಿಧಾನಸಭಾ ಅಧಿವೇಶನದ ಶೂನ್ಯವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲು ಚಿಂತನೆ ನಡೆಸಲಾಗಿದೆ. ಇದರೊಂದಿಗೆ ಮುಖ್ಯ ಮಂತ್ರಿಗಳನ್ನು ಖುದ್ದು ಭೇಟಿಯಾಗಿ ಮನವರಿಕೆ ಮಾಡಿಕೊಡಲು ಕ್ರಮಕೈಗೊಳ್ಳ ಲಾಗುವುದು ಎಂದು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.

ಈಗಾಗಲೇ ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದ ರೈತರಿಂದಲೂ ಇದೇ ಬೇಡಿಕೆ ವ್ಯಕ್ತವಾಗಿದೆ. ಇಂಧನ ಸಚಿವರನ್ನು ಭೇಟಿ ಮಾಡಿದ ಸಂದರ್ಭ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸದನದ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸದನದ ಒಳಗೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಬೇಕೇ ಅಥವಾ, ಸದನದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳಬಹುದೇ ಎಂಬ ಬಗ್ಗೆ ತಾ. ೨೦ ಅಥವಾ ೨೧ರಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕ ಅಪ್ಪಚ್ಚುರಂಜನ್ ಮಾಹಿತಿಯಿತ್ತಿದ್ದಾರೆ.

ಅಕಾಲಿಕ ಮಳೆ ಹಾಗೂ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ಕೊಡಗು ಜಿಲ್ಲೆಯ ೨೨ ಸಾವಿರ ಬೆಳೆಗಾರರಿಗೆ ಈಗಾಗಲೇ ೩೦ ಕೋಟಿ ಪರಿಹಾರ ವಿತರಿಸಲಾಗಿದೆ. ಉಳಿದವರಿಗೆ ಪರಿಹಾರ ವಿತರಣೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಬಿಜೆಪಿ ಸರ್ಕಾರ

(ಮೊದಲ ಪುಟದಿಂದ) ಬಂದ ನಂತರ ೨ನೇ ಬಾರಿ ಪರಿಹಾರ ನೀಡಲಾಗಿದೆ. ಈವರೆಗಿನ ಯಾವುದೇ ಸರ್ಕಾರ ಈ ಮಟ್ಟದಲ್ಲಿ ಪರಿಹಾರ ಒದಗಿಸಿಲ್ಲ. ರಾಜ್ಯ ಬಿ.ಜೆ.ಪಿ. ಸರ್ಕಾರ ರೈತರ ಪರವಿದ್ದು, ಅವರುಗಳ ಹಿತ ಕಾಯುತ್ತಾ ಬಂದಿದೆ ಎಂದು ಶಾಸಕರು ತಿಳಿಸಿದ್ದಾರೆ.

೭ ದಿನ ಪೂರೈಸಿದ ರೈತರ ಧರಣಿ: ರೈತರ ಪ್ರತಿಭಟನೆ ೭ ದಿನ ಪೂರೈಸಿದ್ದು, ಗ್ರಾಮೀಣ ಭಾಗದಿಂದ ರೈತರು ಆಗಮಿಸಿ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಕ್ಷಾತೀತವಾಗಿ ಸತ್ಯಾಗ್ರಹ ನಡೆಯುತ್ತಿದ್ದು, ದಿನಕ್ಕೆ ಒಂದು ಗ್ರಾಮದಂತೆ ರೈತರು ಧರಣಿ ಕೂರುತ್ತಿದ್ದಾರೆ. ತಾಲೂಕು ರೈತ ಸಂಘದ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷ ಯಡೂರು ಕುಶಾಲಪ್ಪ, ಸಂಚಾಲಕ ತಲ್ತರೆ ರಾಜಪ್ಪ, ಹೂವಯ್ಯ ಮಾಸ್ಟರ್, ಗಣಗೂರು ಚಂದ್ರಶೇಖರ್, ಗರಗಂದೂರು ಲಕ್ಷö್ಮಣ್ ಸೇರಿದಂತೆ ಇತರರು ಧರಣಿಯ ನೇತೃತ್ವ ವಹಿಸಿದ್ದು, ಈಗಾಗಲೇ ಮಾಜೀ ಎಂಎಲ್‌ಸಿ ಎಸ್.ಜಿ. ಮೇದಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಭರತ್‌ಕುಮಾರ್, ಉದ್ಯಮಿ ಗಿರೀಶ್ ಮಲ್ಲಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿ, ಧರಣಿಗೆ ಬೆಂಬಲ ಸೂಚಿಸಿದ್ದಾರೆ.

ರೈತರ ಸಮಸ್ಯೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿಯೇ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಹಕ್ಕೊತ್ತಾಯ ಮುಂದಿಟ್ಟು ಧರಣಿ ನಡೆಯುತ್ತಿದ್ದು, ಅನಿರ್ದಿಷ್ಟಾವಧಿಯವರೆಗೆ ಹೋರಾಟ ಸಂಘಟಿಸಲು ರೈತಸಂಘ ಚಿಂತನೆ ನಡೆಸಿದೆ.

- ವಿಜಯ್ ಹಾನಗಲ್