ಸುAಟಿಕೊಪ್ಪ, ಡಿ. ೧೯ : ಸುಂಟಿಕೊಪ್ಪ ಸಮೀಪದ ಹರದೂರುವಿನಲ್ಲಿ ‘ಜೀರಾವಲ ಧಾಮ್ ಪಾರ್ಶ್ವನಾಥ್’ ಜೈನ ಮಂದಿರದ ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಇನ್ನು ಸುಮಾರು ೩ ವರ್ಷಗಳಲ್ಲಿ ಭವ್ಯ ಮಂದಿರ ತಲೆ ಎತ್ತಲಿದೆ. ಮಂದಿರ ಸಂಪೂರ್ಣವಾಗಿ ರಾಜಸ್ಥಾನದ ಅಮೃತ ಶಿಲೆಗಳ ಮೂಲಕವೇ ನಿರ್ಮಾಣವಾಗಲಿದೆ. ಅದ್ಭುತ ಕೆತ್ತನೆಗಳೊಂದಿಗೆ, ದೇವಾಲಯದ ಮೇಲ್ನೋಟದಿಂದ ಪುಷ್ಪಾಕಾರದ ಸುಂದರ ವೀಕ್ಷಣೆ ಜನಮನಸೆಳೆಯಲಿದೆ.

ಓಂ ಶಾಂತಿ ಚಾರಿಟೇಬಲ್ ಟ್ರಸ್ಟ್ನ ಬೆಂಗಳೂರು ಕೇಂದ್ರದಿAದ ಮಂದಿರ ನಿರ್ಮಾಣ ಕಾರ್ಯ ಕಳೆದ ಒಂದು ವರ್ಷದಿಂದಲೇ ಸಾಗುತ್ತಿದ್ದು, ಒಡಿಸ್ಸಾ ರಾಜ್ಯದ ಶಿಲ್ಪಿಗಳು ಅಮೃತಶಿಲೆಗಳ ಮೇಲೆ ವಿವಿಧ ದೇವತೆಗಳ ಕೆತ್ತನೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ಅಮೃತಶಿಲೆಗಳು ರಾಜಸ್ಥಾನದಿಂದಲೇ ಲಾರಿಯ ಮೂಲಕ ಹರದೂರಿಗೆ ರವಾನಿಸಲಾಗುತ್ತಿದೆ.

ಕಳೆದ ವರ್ಷ ಶಿಲಾನ್ಯಾಸ

ಸುಂಟಿಕೊಪ್ಪ ಪಟ್ಟಣದಿಂದ ಸುಮಾರು ೬ ಕಿ.ಮೀ ದೂರದಲ್ಲಿರುವ ಹರದೂರಿನಲ್ಲಿ ಜಾಗ ಖರೀದಿಸಿ ಕಳೆದ ವರ್ಷ ಓಂ ಶಾಂತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಖರೀದಿಸಲಾಯಿತು. ೨೦೨೦ರ ಮಾರ್ಚ್ ೧ ರಂದು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಯಿತು. ಅಮೃತಶಿಲೆಗಳನ್ನು ರಾಜಸ್ಥಾನದಿಂದ ಹರದೂರಿನವರೆಗೆ ಲಾರಿಯ ಮೂಲಕ ಸಾಗಿಸಲಾಗಿದೆ. ಮಂದಿರದ ಕಾಮಗಾರಿ ಇದೀಗ ಬಿರುಸಿನ ಪ್ರಗತಿ ಕಾಣುತ್ತಿದೆ.

ರಾಜಸ್ಥಾನದ ಮಕ್ರಾನದಿಂದ ಬಿಳಿ ಅಮೃತಶಿಲೆಗಳು ಹಾಗೂ ಜೈಸಾಲ್ಮೀರದ ಹಳದಿ ಅಮೃತಶಿಲೆಗಳನ್ನು ಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಬಹುತೇಕ ಅಮೃತಶಿಲೆಗಳು ರಾಜಸ್ಥಾನದಲ್ಲೇ ಕೆತ್ತಲ್ಪಟ್ಟಿವೆ. ಉಳಿದ ಅಮೃತಶಿಲೆಗಳ ಮೇಲೆ ವಿವಿಧ ದೇವತೆಗಳ ಕೆತ್ತನೆ ಕಾರ್ಯ ಇಲ್ಲಿಯೇ ಒಡಿಸ್ಸಾದ ಸುಮಾರು ೨೫ ಕಾರ್ಮಿಕರಿಂದ ನಡೆಯುತ್ತಿದೆ.

ಭಕ್ತಾದಿಗಳಿಗೆ ಸೌಲಭ್ಯಗಳು

ಮಂದಿರ ವೀಕ್ಷಿಸಲೆಂದು ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಸುಮಾರು ೪ ಎಕರೆ ಜಾಗದಲ್ಲಿ ಭೋಜನಶಾಲೆ, ಧರ್ಮಶಾಲೆ, ತಂಗಲು ವಸತಿ ಎಲ್ಲವೂ ಕಲ್ಪಿಸಲಾಗುವುದು.

(ಮೊದಲ ಪುಟದಿಂದ) ಮಂದಿರವು ಸುಮಾರು ೧೦,೦೦೦ ಚದರ ಅಡಿಗಳಲ್ಲಿ ನಿರ್ಮಾಣವಾಗಲಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳೂರಿನಲ್ಲಿ ಸುಮಾರು ೧೧ ನೇ ಶತಮಾನದ ಜೈನ ಬಸದಿಯೊಂದಿದೆ. ಆಗ ಜಿಲ್ಲೆಯನ್ನಾಳುತ್ತಿದ್ದ ಕೊಂಗಾಳ್ವರು ಇದನ್ನು ನಿರ್ಮಿಸಿದ್ದಾರೆ ಎಂಬುದು ಇತಿಹಾಸದಲ್ಲಿದೆ. ಪ್ರಸ್ತುತ ಜಿಲ್ಲೆಯಲ್ಲಿ ಇದೊಂದೇ ಜೈನ ಮಂದಿರ ಉಳಿದಿದೆಯಾದರೂ, ನೂತನವಾಗಿ ಯಾವುದೇ ಜೈನ ಮಂದಿರ ನಿರ್ಮಾಣಗೊಂಡಿಲ್ಲ.

ಕೊಡಗಿನ ಪರಿಸರ ಅತ್ಯುತ್ತಮವಾಗಿದೆ. ಈ ಕಾರಣದಿಂದಾಗಿ ಈ ಜಿಲ್ಲೆಯಲ್ಲೊಂದು ಜೈನ ಮಂದಿರ ನಿರ್ಮಾಣವಾಗಬೇಕೆಂಬ ಉದ್ದೇಶ ಟ್ರಸ್ಟ್ನ ಅಧ್ಯಕ್ಷ ರಮೇಶ್ ಅವರದ್ದಾಗಿತ್ತು. ಮಡಿಕೇರಿಯಲ್ಲಿನ ಕೋಟೆಯ ಸಂಗ್ರಹಾಲಯದಲ್ಲಿ ಮಹಾವೀರರ ವಿಗ್ರಹವಿದೆ. ಈ ವಿಗ್ರಹವು ಕೊಡಗಿನಲ್ಲಿಯೇ ದೊರೆತ್ತಿದ್ದು, ಇಲ್ಲಿ ಮತ್ತಷ್ಟು ಜೈನ ಮಂದಿರಗಳು ಇದ್ದವು ಎಂಬುದಕ್ಕೆ ಪುರಾವೆ ಎಂದು ಮಂದಿರ ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡಿರುವ ಗೋವಿಂದ್ ಅವರು ಹೇಳುತ್ತಾರೆ.

೩ ವರ್ಷಗಳಲ್ಲಿ ಭವ್ಯ ಮಂದಿರ ನಿರ್ಮಾಣವಾಗಲಿದ್ದು, ಎಲ್ಲರಿಗೂ ಮಂದಿರ ಪ್ರವೇಶಕ್ಕೆ ಅವಕಾಶವಿದೆ ಎಂದು ಕೂಡ ಅವರು ಮಾಹಿತಿ ಇತ್ತಿದ್ದಾರೆ. -ಪ್ರಜ್ವಲ್ ಜಿ.ಆರ್./ ರಾಜು ರೈ