ಗೋಣಿಕೊಪ್ಪ ವರದಿ, ಡಿ. ೧೮: ಮೆಗಾ ಲೋಕ ಅದಾಲತ್‌ನಲ್ಲಿ ಒಂದೇ ದಿನ ೩೮೮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವಲ್ಲಿ ಪೊನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಯಶಸ್ವಿಯಾಗಿದೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ವ್ಯಾಜ್ಯಪೂರ್ವ ಮತ್ತು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ರಾಜಿಯಾಗುವಂತ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ನಡೆದ ಅದಾಲತ್‌ನಲ್ಲಿ ಸುಮಾರು ೧ ಸಾವಿರ ಪ್ರಕರಣಗಳಲ್ಲಿ ೩೮೮ ಪ್ರಕರಣ ರಾಜಿ ಸಂಧಾನದ ಮೂಲಕ ಯಶಸ್ವಿಯಾಯಿತು. ೩೭೩ ಕ್ರಿಮಿನಲ್, ೧೫ ಸಿವಿಲ್ ಪ್ರಕರಣ ಇತ್ಯರ್ಥ ಕಂಡಿದೆ. ಇದು ಇಲ್ಲಿವರೆಗೆ ಒಂದೇ ದಿನ, ಒಂದೇ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಕೌಟುಂಬಿಕ ಕಲಹದಿಂದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ೪ ದಂಪತಿಗಳು ಕೂಡ ರಾಜಿ ಮಾಡಿಕೊಂಡು ಇತ್ಯರ್ಥಪಡಿಸಿ ಕೊಂಡಿದ್ದಾರೆ. ಬ್ಯಾಂಕ್‌ನಲ್ಲಿ ಸಾಲ ಪಡೆದ ಪ್ರಕರಣ ಕೂಡ ಇತ್ಯರ್ಥಗೊಂಡಿದೆ.
ನ್ಯಾಯಾಧೀಶ ಬಿ. ಗಿರಿಗೌಡ ಮತ್ತು ೪೦ ಕ್ಕೂ ಹೆಚ್ಚು ವಕೀಲರು ಅದಾಲತ್‌ನಲ್ಲಿ ಪಾಲ್ಗೊಂಡು ರಾಜಿ ಮೂಲಕ ಇತ್ಯರ್ಥದ ಜವಾಬ್ದಾರಿ ನಿಭಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಕಳಕಂಡ ಡಿ. ಮುತ್ತಪ್ಪ ಇಷ್ಟೊಂದು ರಾಜಿ ಪ್ರಕರಣ ಒಂದೇ ದಿನದಲ್ಲಿ ಒಂದೇ ನ್ಯಾಯಾಲಯದಲ್ಲಿ ನಡೆದಿರುವುದು ಕೊಡಗು ಜಿಲ್ಲೆಯಲ್ಲಿಯೇ ಪ್ರಥಮ ಸಾಧನೆಯಾಗಿದೆ. ಅದಾಲತ್ ಮಹತ್ವದ ಬಗ್ಗೆ ನಡೆಸಿದ ಜಾಗೃತಿ ಕಾರ್ಯಕ್ರಮ ಕೂಡ ಪ್ರಯೋಜನಕ್ಕೆ ಬಂದಿದೆ. ನ್ಯಾಯಾದೀಶರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಕಕ್ಷಿದಾರರು ಅದಾಲತ್‌ನಲ್ಲಿ ಭಾಗವಹಿಸಿ ರಾಜಿ ಮೂಲಕ ಪ್ರಕರಣ ಇತ್ಯರ್ಥಕ್ಕೆ ಮುಂದಾಗಬೇಕು. ನ್ಯಾಯಾಲಯ ಕೂಡ ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.