ಸೋಮವಾರಪೇಟೆ, ಡಿ.೧೮: ಕೊಡಗಿನ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲೆಯ ಶಾಸಕರುಗಳೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ವಿಧಾನ ಪರಿಷತ್‌ಗೆ ಆಯ್ಕೆಯಾದ ನೂತನ ಸದಸ್ಯ ಸುಜಾ ಕುಶಾಲಪ್ಪ ಭರವಸೆ ನೀಡಿದರು.

ವಿವಿಧ ಬೇಡಿಕೆಗಳನ್ನು ಈಡೇರಿ ಸುವಂತೆ ಆಗ್ರಹಿಸಿ ಇಲ್ಲಿನ ಜೇಸೀ ವೇದಿಕೆಯಲ್ಲಿ ಧರಣಿ ನಡೆಸುತ್ತಿರುವ ರೈತ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಅವರು, ಕೊಡಗಿನಲ್ಲಿ ರೈತರು ಹಲವು ಸಮಸ್ಯೆಗಳ ನಡುವೆ ದಿನಕಳೆಯುತ್ತಿದ್ದು, ನ್ಯಾಯಯುತ ಹೋರಾಟಕ್ಕೆ ಪರಿಷತ್‌ನಲ್ಲಿ ಧ್ವನಿಯಾಗುವುದಾಗಿ ತಿಳಿಸಿದರು.

ಕಾಫಿ ಬೆಳೆಗಾರರ ೧೦ ಎಚ್.ಪಿ.ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ, ಸ್ವಾಮಿನಾಥನ್ ವರದಿ ಜಾರಿ, ವನ್ಯ ಪ್ರಾಣಿ ಹಾವಳಿ ತಡೆಗೆ ಶಾಶ್ವತ ಪರಿಹಾರ, ಜಿಲ್ಲಾ ಹೆದ್ದಾರಿ ನಿರ್ವಹಣೆ, ಭೂ ದಾಖಲೆಗಳ ಸಮರ್ಪಕ ನಿರ್ವಹಣೆ, ರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ರೈತ ಸಂಘದ ಅಧ್ಯಕ್ಷ ದಿನೇಶ್, ಪ್ರಮುಖರಾದ ಮಚ್ಚಂಡ ಅಶೋಕ್, ಲಕ್ಷö್ಮಣ್ ಸೇರಿದಂತೆ ಇತರರು ಮನವಿ ಮಾಡಿದರು.

ತಾನೂ ಓರ್ವ ರೈತನಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿದ್ದು, ಜಿಲ್ಲೆಯ ಈರ್ವರು ಶಾಸಕರುಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು. ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಗಮನ ಸೆಳೆಯಲಾಗುವುದು ಎಂದು ಭರವಸೆಯಿತ್ತರು.

ಇಲ್ಲಿನ ಜೇಸೀ ವೇದಿಕೆಯಲ್ಲಿ ಕಳೆದ ತಾ. ೧೩ರಿಂದ ಪ್ರತಿಭಟನೆ ನಡೆಯುತ್ತಿದ್ದು, ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ರೈತರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಒದಗಿಸುವಂತೆ ಆಗ್ರಹಿಸಿ ರೈತ ಸಂಘದಿAದ ನಡೆಯುತ್ತಿರುವ ಧರಣಿ ೬ನೇ ದಿನಕ್ಕೆ ಕಾಲಿಟ್ಟಿದೆ.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ಗಿರೀಶ್ ಮಲ್ಲಪ್ಪ ಸೇರಿದಂತೆ ಇತರ ಪ್ರಮುಖರು ಧರಣಿಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಹವಾಮಾನ ವೈಪರೀತ್ಯ, ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಉತ್ಪಾದನೆ ಕಡಿಮೆಯಾಗಿದೆ. ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ಸಣ್ಣ ರೈತರೇ ಕಾಫಿ ಬೆಳೆಯುತ್ತಿರುವುದರಿಂದ ಕಾಫಿಯನ್ನು ಕೃಷಿ ಬೆಳೆ ಎಂದೇ ಪರಿಗಣಿಸಿ ಸೌಲಭ್ಯಗಳನ್ನು ನೀಡಬೇಕು ಎಂದು ಪ್ರಮುಖರು ಆಗ್ರಹಿಸಿದರು.