ಕುಶಾಲನಗರ, ಡಿ. ೧೮: ನಾಗಾಲೋಟದ ಅಭಿವೃದ್ಧಿಯ ನಡುವೆ ಸಂಸ್ಕೃತಿ, ಭಾಷೆಗಳು ನಶಿಸಿಹೋಗದಂತೆ ಎಚ್ಚರವಹಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಗೌಡ ಸಮಾಜ ಮತ್ತು ಅಂಗ ಸಂಸ್ಥೆಗಳ ಆಶ್ರಯದಲ್ಲಿ ಸ್ಥಳೀಯ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಅರೆಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಸಮುದಾಯದ ಯುವಪೀಳಿಗೆಗೆ ಭಾಷೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.

ಕುಲ್ಲಚೆಟಿ ಪೂವಯ್ಯ ಅವರು ಜನನದಿಂದ ಮರಣದ ತನಕ ಮಾಹಿತಿ ಬಗ್ಗೆ ವಿಷಯ ಮಂಡನೆ ಮಾಡಿದರು. ಅರೆ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಬೈಮನ ಬೋಜಮ್ಮ ವಿಷಯ ಮಂಡಿಸಿದರು.

ಪದ್ಮಾವತಿ ಮಹಿಳಾ ಒಕ್ಕೂಟದ ಸದಸ್ಯರು ಅರೆಭಾಷೆ ಹಾಡು ಹಾಡಿದರು. ಕರಂದ್ಲಾಜೆ ಆನಂದ ಅವರು ಪ್ರಾಸ್ತಾವಿಕ ನುಡಿಗಳು, ಸೆಟೆಜನ ಗಣಪತಿ ಸ್ವಾಗತ ಸೂದನ ಗೋಪಾಲ್ ಕಾರ್ಯಕ್ರಮ ನಿರೂಪಿಸಿ, ಕುಶಾಲಪ್ಪ ವಂದಿಸಿದರು.

ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌಡ ಸಮಾಜದ ಅಂಗ ಸಂಸ್ಥೆಗಳಾದ ಗೌಡ ಯುವಕ ಸಂಘ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಗೌಡ ಮಹಿಳಾ ಸ್ವಸಹಾಯ ಸಂಘ, ಮಾಜಿ ಗೌಡ ಸೈನಿಕರ ಕೂಟ, ಯೂತ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.