ಕಣಿವೆ, ಡಿ. ೧೮: ಬಸವನಹಳ್ಳಿ ಯಲ್ಲಿರುವ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿತು.

ಸಂಘವು ಪ್ರಸಕ್ತ ಸಾಲಿನಲ್ಲಿ ೪.೫೮ ಲಕ್ಷ ರೂ. ಲಾಭವನ್ನು ಹೊಂದಿದೆ. ಸಂಘದ ವತಿಯಿಂದ ಕಿರು ಅರಣ್ಯ ಉತ್ಪನ್ನಗಳಾದ ಸೀಗೆಕಾಯಿ, ಮರದಪಾಚಿ, ಜೇನು ಸಂಗ್ರಹಿಸಿ ಸದಸ್ಯರಿಗೆ ಉದ್ಯೋಗದ ಅವಕಾಶ ಗಳನ್ನು ಕಲ್ಪಿಸಿ ಮಾರಾಟ ಮಾಡಲಾಗುತ್ತಿದೆ ಹಾಗೆಯೇ ಅಂದಿನ ಮಾರುಕಟ್ಟೆಯ ದರವನ್ನು ಆಧರಿಸಿ ಬೆಲೆ ನೀಡಲಾಗುತ್ತಿದೆ. ಸಂಘದ ಸದಸ್ಯರು ಇನ್ನಷ್ಟು ಹೆಚ್ಚಿನ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಸಂಘಕ್ಕೆ ಮಾರಾಟ ಮಾಡುವ ಮೂಲಕ ಸಂಘದ ಆರ್ಥಿಕ ಪ್ರಗತಿಗೆ ಸಹಕರಿಸ ಬೇಕೆಂದು ಚಂದ್ರು ಕರೆಕೊಟ್ಟರು.

ಸಂಘದ ಹಿಂದಿನ ಆಡಳಿತ ಮಂಡಳಿಯಲ್ಲಿ ನಡೆದಿರುವ ಸಂಘದ ಹಣ ದುರುಪಯೋಗದ ಕುರಿತು ಹಳೆಯ ಆಡಳಿತ ಮಂಡಳಿ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಲಾಗು ವುದು ಎಂದು ಹೇಳಿದ ಅಧ್ಯಕ್ಷ ಚಂದ್ರು, ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ರಾಜಾರಾವ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮಹಾಸಭೆಯ ಒಪ್ಪಿಗೆ ಪಡೆದರು.

ಹಾಗೆಯೇ ಸಂಘದಲ್ಲಿರುವ ಕುಶಾಲನಗರ ಹಾಗೂ ಸೋಮವಾರ ಪೇಟೆ ವಲಯಗಳ ಕುರಿತು ಸಭೆಯಲ್ಲಿ ಸದಸ್ಯರು ಚರ್ಚಿಸಿ ಸೋಮವಾರಪೇಟೆ ವಲಯಕ್ಕೆ ೨೪ ಗ್ರಾ.ಪಂ.ಗಳು ಹಾಗೂ ಕುಶಾಲನಗರ ವಲಯಕ್ಕೆ ೧೮ ಗ್ರಾ.ಪಂ.ಗಳು ಸೇರ್ಪಡೆ ಗೊಂಡಿವೆ. ಆದರೆ ಕುಶಾಲನಗರ ಸೋಮವಾರ ಪೇಟೆ ವಲಯಕ್ಕಿಂತ ಜನಸಂಖ್ಯೆಯಲ್ಲಿ ಹೆಚ್ವು ಇರುವುದ ರಿಂದ ಕೂಡಿಗೆಯ ಹಾರಂಗಿ ನದಿಯಿಂದ ನೆಲ್ಲಿಹುದಿಕೇರಿ, ಚೆಟ್ಟಳ್ಳಿ ಸೇರಿದಂತೆ ಕುಶಾಲನಗರ ವಲಯಕ್ಕೂ, ಹಾರಂಗಿ ನದಿಯಿಂದ ಕೊಡ್ಲಿಪೇಟೆ, ಶಾಂತಳ್ಳಿ, ಶಿರಂಗಾಲ ದವರೆಗೂ ಸೋಮವಾರಪೇಟೆ ವಲಯ ವಾಗಿಯೂ ಹಂಚಿಕೆ ಮಾಡುವಂತೆ ಮಹಾಸಭೆಯಲ್ಲಿ ತೀರ್ಮಾನಿ ಸಲಾಯಿತು.

ಮಾರ್ಚ್ ಅಂತ್ಯದೊಳಗೆ ಸಂಘಕ್ಕೆ ೨ ಲಕ್ಷ ರೂ. ಹಣ ಪಾವತಿಸುವುದಾಗಿ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮಹಾಸಭೆಯಲ್ಲಿ ಘೋಷಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಸ್. ಮನು, ನಿರ್ದೇಶಕರಾದ ಸಿ.ಕೆ. ಉದಯಕುಮಾರ್, ಬಿ.ಎಂ. ಯಶೋಧಾ, ಬಿ.ಆರ್. ಸುರೇಶ್, ಅಣ್ಣಯ್ಯ, ಎಸ್.ಆರ್. ಕಮಲ, ಕಾವೇರಿ, ಬಿ.ಬಿ. ಮಹೇಶ್, ಅರಣ್ಯಾಧಿಕಾರಿ ಪೂವಯ್ಯ, ಸಂಘದ ಕಾರ್ಯನಿರ್ವಹಣಾಧಿಕಾರಿ ಬಿ.ಬಿ. ಹನಿಕುಮಾರ್ ಇದ್ದರು.