ಸುಂಟಿಕೊಪ್ಪ, ಡಿ. ೧೭: ಕೋವಿಡ್ ೧೯ ಮುಕ್ತವಾಗಿ ಸುಖೀ ಸಮಾಜ ನಿರ್ಮಾಣವಾಗುವಂತಾಗಲಿ. ಆರೋಗ್ಯ ಭಾಗ್ಯ ಎಲ್ಲರಿಗೂ ಲಭಿಸಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಫಲ ಪ್ರಾಪ್ತವಾಗಲಿ ಎಂದು ಸುಂಟಿಕೊಪ್ಪ ನಾಡ ಕಚೇರಿಯ ಉಪತಹಶೀಲ್ದಾರ್ ಹೆಚ್.ಕೆ. ಶಿವಪ್ಪ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟಿ.ಸಿ. ಟ್ರಸ್ಟ್ ಸೋಮವಾರಪೇಟೆ ಸುಂಟಿಕೊಪ್ಪ ವಲಯ ಮಟ್ಟದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರು ಸ್ವಾವಲಂಬಿ ಜೀವನಕ್ಕೆ ಒಕ್ಕೂಟ ವ್ಯವಸ್ಥೆಯಲ್ಲಿ ಸಹಕಾರಿಯಾಗುತ್ತಿರುವುದರಿಂದ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು. ಧಾರ್ಮಿಕ ಉಪನ್ಯಾಸ ನೀಡಿದ ಸಿ.ಎನ್. ಸೋಮೇಶ್ ಮಾತನಾಡಿ, ಧರ್ಮ ಜಾತಿ ಮತ ವರ್ಗ ಭೇದವಿಲ್ಲದೆ ಧರ್ಮಸ್ಥಳದ ಶ್ರೀ ವಿರೇಂದ್ರ ಹೆಗಡೆ ಮಾತೃಶ್ರೀ ಹೇಮಾವತಿ ಅವರು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಹಳಮಂದಿ ಅಶಕ್ತರ ಕಡುಬಡವರ ಬದುಕು ಹಸನಾಗಿದೆ. ಪ್ರತಿಯೊಂದು ಕುಟುಂಬದವರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರೀರಕ್ಷೆಯಾಗಿದೆ ಎಂದೂ ಅವರು ಹೇಳಿದರು. ಸಾಧಕ ಸಂಘಗಳಿಗೆ ಬಹುಮಾನ ವಿತರಣೆ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಮಾತನಾಡಿದರು.

ಹಸಿರು ಇಂಧನ ಸಾಧನಗಳ ವಿತರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಡಾ. ಯೋಗೀಶ್. ಎ. ಮಾಡಿದರು. ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಶಿವಮ್ಮ ಆರೋಗ್ಯ ರಕ್ಷಾ ಕಾರ್ಡು ವಿತರಿಸಿದರು. ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಅಧ್ಯಕ್ಷರಾದ ರಮಣಿ ಹರಿಶ್ಚಂದ್ರ ವಹಿಸಿದ್ದರು. ವೇದಿಕೆಯಲ್ಲಿ ವಿವಿಧ ಒಕ್ಕೂಟಗಳ ಅಧ್ಯಕ್ಷರುಗಳಾದ ನಾಗರತ್ನ, ಗಾಯತ್ರಿ, ಪ್ರಮೀಳಾ, ಚಂದ್ರವತಿ, ರೇಖಾ, ಪುಷ್ಪ, ತಂಗಮಣಿ ಹಾಗೂ ಜಯಂತಿ ವೇದಿಕೆಯಲ್ಲಿದ್ದರು.

ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ರೋಹಿತ್ ಹೆಚ್. ಸ್ವಾಗತಿಸಿ, ಸುಂಟಿಕೊಪ್ಪ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಪುಷ್ಪಲತಾ ನಿರೂಪಿಸಿ, ವಂದಿಸಿದರು.