ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ನಿಧನ

ಬೆಂಗಳೂರು, ಡಿ. ೧೭: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ೯೬ ವರ್ಷದ ಆರ್.ಎಲ್. ಜಾಲಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಪ್ರತಿನಿಧಿಸಿದ್ದರು. ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿರುವ ಜಾಲಪ್ಪ ಅವರು ೧೯೯೬ರಲ್ಲಿ ಹೆಚ್.ಡಿ. ದೇವೇಗೌಡರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಆರ್.ಎಲ್. ಜಾಲಪ್ಪ ನಿಧನಕ್ಕೆ ರಾಜ್ಯ ನಾಯಕರು ಸಂತಾಪ ಸೂಚಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಅಂತ್ಯಕ್ರಿಯೆ ತಾ. ೧೮ ರಂದು (ಇಂದು) ನೆರವೇರಲಿದೆ.

ಕಸ್ತೂರಿ ರಂಗನ್ ವರದಿ-ಹುಲಿ ಯೋಜನೆ ಕೈಬಿಡಲು ಒತ್ತಾಯ

ಮಂಗಳೂರು, ಡಿ. ೧೭: ಪಶ್ಚಿಮಘಟ್ಟ ಪ್ರದೇಶದ ತಪ್ಪಲಿನಲ್ಲಿ ವಾಸಿಸುವ ಜನತೆಯ ಅನುಕೂಲಕ್ಕಾಗಿ ಕಸ್ತೂರಿ ರಂಗನ್ ವರದಿ ಹಾಗೂ ಹುಲಿ ಯೋಜನೆ ಜಾರಿಯನ್ನು ಕೇಂದ್ರ ಸರಕಾರ ಕೈಬಿಡಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಒತ್ತಾಯಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ತಾನು ಅರಣ್ಯ ಸಚಿವನಾಗಿದ್ದಾಗ ಕೇಂದ್ರದಲ್ಲಿದ್ದ ಎನ್‌ಡಿಎ ಸರಕಾರ ಕಸ್ತೂರಿ ರಂಗನ್ ವರದಿಯ ಕರಡು ಪ್ರತಿ ಸಿದ್ಧಪಡಿಸಿತ್ತು. ಇದನ್ನು ಜಾರಿಗೊಳಿಸಿದರೆ ಪಶ್ಚಿಮಘಟ್ಟ ತಪ್ಪಲಿನಲ್ಲಿ ವಾಸಿಸುವ ಅನೇಕ ಕುಟುಂಬಗಳಿಗೆ ತೊಂದರೆಯಾಗುತ್ತದೆ ಎಂಬ ದೂರುಗಳು ಕೇಳಿಬಂತು. ಆಗ ಪ್ರತಿಪಕ್ಷ ಬಿಜೆಪಿ ಪಶ್ಚಿಮಘಟ್ಟ ತಪ್ಪಲಿನಲ್ಲಿ ಜನತೆಯನ್ನು ಬೀದಿಗಿಳಿದು ಪ್ರತಿಭಟಿಸುವಂತೆ ಕುಮ್ಮಕ್ಕು ನೀಡಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದಲ್ಲಿ ಹಾಲಿ ಇರುವ ಸೂಕ್ಷö್ಮ ಪ್ರದೇಶ, ಅಭಯಾರಣ್ಯಗಳನ್ನು ಮಾತ್ರ ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಒಳಪಡಿಸಿದರೆ ಸಾಕು, ಹೆಚ್ಚುವರಿ ವ್ಯಾಪ್ತಿ ವಿಸ್ತರಿಸದಂತೆ ಕೇಂದ್ರ ಸರಕಾರಕ್ಕೆ ರಾಜ್ಯದಿಂದ ಶಿಫಾರಸು ಮಾಡಲಾಗಿತ್ತು. ಆದರೆ ಅದೇ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿ ಅದನ್ನು ಪರಿಷ್ಕರಿಸುವಂತೆ ರಾಜ್ಯಕ್ಕೆ ವಾಪಸ್ ಕಳುಹಿಸಿತ್ತು. ಪ್ರತಿ ಬಾರಿಯೂ ರಾಜ್ಯ ಸರಕಾರ ಅದೇ ವರದಿಯನ್ನು ಕೇಂದ್ರಕ್ಕೆ ಕಳುಹಿಸುವುದು, ಕೇಂದ್ರ ವಾಪಸ್ ಕಳುಹಿಸುವುದು ನಡೆಯುತ್ತಲೇ ಇದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು. ಈಗ ಕಸ್ತೂರಿ ರಂಗನ್ ವರದಿ ಬಗ್ಗೆ ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವರದಿಯನ್ನು ರದ್ದುಪಡಿಸುವ ಅಧಿಕಾರ ಇರುವುದು ಕೇಂದ್ರಕ್ಕೆ ಮಾತ್ರ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದು, ಪಶ್ಚಿಮಘಟ್ಟ ತಪ್ಪಲಿನ ಜನತೆಯ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಬಿಜೆಪಿ ಮುಖಂಡರು ಈ ಯೋಜನೆ ರದ್ದುಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಲಿ. ಇಲ್ಲದಿದ್ದರೆ ಕಸ್ತೂರಿ ರಂಗನ್ ವರದಿ ವಿಚಾರ ರಾಷ್ಟಿçÃಯ ಪರಿಸರ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದು, ಮತ್ತೆ ಅಲ್ಲಿಂದ ಅನುಮತಿ ಪಡೆದು ರದ್ದುಗೊಳಿಸಬೇಕಾಗುತ್ತದೆ. ಹಾಗಾಗಿ ಬಿಜೆಪಿಗರು ಬಾಯಿಮಾತಿನಲ್ಲಿ ವಿರೋಧ ಬದಲು ಕಸ್ತೂರಿ ರಂಗನ್ ವರದಿ ಹಾಗೂ ಹುಲಿ ಯೋಜನೆಯನ್ನು ಕೈಬಿಡುವಂತೆ ಕೇಂದ್ರವನ್ನು ಒತ್ತಾಯಿಸಲಿ ಎಂದರು.

ಹಾಕಿ: ಪಾಕಿಸ್ತಾನ ವಿರುದ್ಧ ಭಾರತಕ್ಕೆ ೩-೧ ಗೆಲುವು

ಢಾಕಾ, ಡಿ. ೧೭: ಟಿ೨೦ ವಿಶ್ವಕಪ್‌ನಲ್ಲಿ ಕೊಹ್ಲಿ ಪಡೆ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲು ಕಂಡಿತ್ತು. ಆದರೆ, ೨೦೨೧-ಏಷಿಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಹಾಕಿ ತಂಡ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿ ಸೇಡು ತೀರಿಸಿಕೊಂಡಿದೆ. ಉಭಯ ತಂಡಗಳ ನಡುವೆ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ೩-೧ ಅಂತರದ ಗೋಲುಗಳಿಂದ ವಿಜಯ ದುಂದುಬಿ ಮೊಳಗಿಸಿದೆ. ಇದಕ್ಕೂ ಮುನ್ನ ಅಕ್ಟೋಬರ್ ೨೪ ರಂದು ಟಿ೨೦ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾರತವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತ್ತು. ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನ, ಟೀಂ ಇಂಡಿಯಾವನ್ನು ಸೋಲುಣಿಸಿರುವುದು ದಾಖಲೆ ಯಾಗಿದೆ. ಇಂದು ಢಾಕಾದಲ್ಲಿ ನಡೆದ ಏಷಿಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತದ ಪರ ಎರಡು ಗೋಲುಗಳಿಸಿದ ಹರ್ಮನ್‌ಪ್ರೀತ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಭಾರತ ೭ ಪಾಯಿಂಟ್ಸ್ ತನ್ನ ಖಾತೆಗೆ ಹಾಕಿ ಕೊಂಡಿತು. ಈ ವಿಜಯದೊಂದಿಗೆ ಟೀಂ ಇಂಡಿಯಾ ಹಾಕಿ ಸೆಮಿ ಫೈನಲ್ ತಲುಪುವುದು ಖಚಿತವಾಗಿದೆ. ಆದರೆ, ಅತ್ತ ಪಾಕಿಸ್ತಾನಕ್ಕೂ ಸೆಮಿಫೈನಲ್‌ಗೆ ಕಮ್ ಬ್ಯಾಕ್ ಮಾಡುವ ಅವಕಾಶ ಇದೆ.

ಬಸ್-ಕಾರು ನಡುವೆ ಅಪಘಾತ: ನಾಲ್ವರ ದುರ್ಮರಣ

ದಾವಣಗೆರೆ, ಡಿ. ೧೭: ದಾವಣಗೆರೆ ಜಿಲ್ಲೆಯ ನ್ಯಾಮತಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ನಾಲ್ವರು ದುರ್ಮರಣ ಹೊಂದಿದ್ದಾರೆ. ಸವಳÀಂಗ ಬಳಿ ಮಧ್ಯಾಹ್ನ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಭದ್ರವತಿಯ ಎಡೇಹಳ್ಳಿ ಗ್ರಾಮದ ಸುನೀಲ್ ದ್ರಾಕ್ಷಾಣಿ, ಸುಮ ಮತ್ತು ಶಾರದಮ್ಮ ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡಿರುವ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸ್ಥಳಕ್ಕೆ ಹೊನ್ನಾಳಿ ಸಿಪಿಐ ದೇವರಾಜ್ ಹಾಗೂ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರು ಯಡೇಹಳ್ಳಿಯಿಂದ ನ್ಯಾಮತಿ ತಾಲೂಕಿನ ಹಳೇಜೋಗ ಗ್ರಾಮಕ್ಕೆ ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ಆಗಮಿಸುತ್ತಿದ್ದರು.