ಮಡಿಕೇರಿ, ಡಿ. ೧೭: ಬೆಂಗಳೂರು ಕೊಡವ ಸಮಾಜ ಮತ್ತು ಕುಲ್ಲೇಟಿರ ಕುಟುಂಬಸ್ಥರ ನಿಯೋಗ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹಾಗೂ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರ ನೇತೃತ್ವದಲ್ಲಿ ಕ್ರೀಡಾ ಸಚಿವ ನಾರಾಯಣ ಗೌಡ ಅವರನ್ನು ಇತ್ತೀಚೆಗೆ ಭೇಟಿಯಾಯಿತು.
೨೦೧೮ ರಲ್ಲಿ ನಡೆದ ಕುಲ್ಲೇಟಿರ ಕಪ್ ಕೊಡವ ಕೌಟುಂಬಿಕ ಹಾಕಿ ಹಬ್ಬದ ಅನುದಾನದಲ್ಲಿ ಬರಲು ಬಾಕಿ ಇರುವ ರೂ. ೧೫ ಲಕ್ಷವನ್ನು ಬಿಡುಗಡೆ ಮಾಡುವಂತೆ ಪ್ರಮುಖರು ಮನವಿ ಮಾಡಿದರು. ಕ್ರೀಡಾಕಲಿಗಳ ನಾಡೆಂದು ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವ ವಿದ್ಯಾನಿಲಯವೊಂದನ್ನು ಸ್ಥಾಪಿಸಬೇಕು ಮತ್ತು ಪ್ರತಿವರ್ಷ ನಡೆಯುವ ಕೌಟುಂಬಿಕ ಹಾಕಿ ಕ್ರೀಡಾಕೂಟಕ್ಕೆ ರೂ. ೫೦ ಲಕ್ಷ ಅನುದಾನ ನೀಡಿ ಸಹಕರಿಸಬೇಕೆಂದು ಸಚಿವರಲ್ಲಿ ಕೋರಲಾಯಿತು. ಕುಲ್ಲೇಟಿರ ಕಪ್ ಹಾಕಿ ಹಬ್ಬಕ್ಕೆ ಮೊದಲ ಕಂತಿನಲ್ಲಿ ೨೫ ಲಕ್ಷ ರೂಪಾಯಿಗಳನ್ನು ನೀಡಲು ಸಹಕರಿಸಿದ ಸಚಿವ ನಾರಾಯಣ ಗೌಡರನ್ನು ಕುಲ್ಲೇಟಿರ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.
ನಂತರ ಮಾತನಾಡಿದ ಶಿವ ಕುಮಾರ್ ನಾಣಯ್ಯ ಕ್ರೀಡಾ ಸಚಿವರಿಂದ ನಮ್ಮ ಬೇಡಿಕೆಗಳಿಗೆ ಪೂರಕ ಸ್ಪಂದನೆ ದೊರೆತಿದೆ ಎಂದರು. ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಹಾಗೂ ಹೈಕೋರ್ಟ್ ವಕೀಲ ಎಂ.ಟಿ. ನಾಣಯ್ಯ, ಹಿರಿಯ ವಕೀಲ ಮಲ್ಲಂಗಡ ನೆಹರು, ಕುಲ್ಲೇಟಿರ ಹಾಕಿ ಹಬ್ಬದ ಕಾರ್ಯದರ್ಶಿ ಹಾಗೂ ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಮುಕ್ಕಾಟಿರ ಪೂಣಚ್ಚ (ಬಾಬ) ಹಾಗೂ ತೇಲಪಂಡ ರಾಘ ವೇಂದ್ರ ನಾಣಯ್ಯ ಉಪಸ್ಥಿತರಿದ್ದರು.