ಸೋಮವಾರಪೇಟೆ, ಡಿ. ೧೬: ಇಲ್ಲಿನ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಹನುಮ ಜಯಂತಿ ಅಂಗವಾಗಿ ದೇವಾಲಯವನ್ನು ತಳಿರುತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ಇಂದು ಬೆಳಿಗ್ಗೆ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ವದಲ್ಲಿ ಶ್ರೀ ಮಾರುತಿ ಹೋಮ ಹವನಾದಿ ಪೂಜಾ ಕಾರ್ಯಗಳು ನಡೆದವು. ಅರ್ಚಕರುಗಳಾದ ನಂಜುAಡಸ್ವಾಮಿ, ಪ್ರಸಾದ್ ಭಟ್, ಗಣೇಶ್ ಭಟ್, ವಾದಿರಾಜ್ ಭಟ್, ಚಂದ್ರಹಾಸ್ ಭಟ್ ಅವರುಗಳು ದೇವಾಲಯದಲ್ಲಿ ಪೂಜೆ ನೆರವೇರಿಸಿದರು.
ಮಧ್ಯಾಹ್ನ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಆಂಜನೇಯ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ನೂತನವಾಗಿ ದೇವಾಲಯ ನಿರ್ಮಿಸಲಾಗುತ್ತಿದೆ. ಭಕ್ತಾದಿಗಳು ಹೆಚ್ಚಿನ ಸಹಕಾರ ನೀಡಬೇಕೆಂದು ದೇವಾಲಯ ಸಮಿತಿ ಅಧ್ಯಕ್ಷ ಬನ್ನಳ್ಳಿ ಗೋಪಾಲ್ ಹೇಳಿದರು.
ಪೂಜಾ ಕಾರ್ಯದಲ್ಲಿ ದೇವಾಲಯ ಸಮಿತಿ ಕಾರ್ಯದರ್ಶಿ ನಂದಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ್ ಸೇರಿದಂತೆ ಸದಸ್ಯರುಗಳು, ಭಕ್ತಾದಿಗಳು ಭಾಗವಹಿಸಿದ್ದರು