ಸೋಮವಾರಪೇಟೆ, ಡಿ. ೧೬: ಮೀಸಲಾತಿ ಗೊಂದಲ ಹಾಗೂ ಅಭಿವೃದ್ಧಿ ಕಾರ್ಯ ನಿರ್ಲಕ್ಷö್ಯದಿಂದ ಬಹಿಷ್ಕರಿಸಲ್ಪಟ್ಟಿದ್ದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮದ ೨ ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಇಂದು ಒಂದು ನಾಮಪತ್ರ ಸಲ್ಲಿಕೆಯಾಗಿದೆ.

ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಕೆ.ಎ. ಸುಕನ್ಯಾ ಅಶೋಕ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ತಾ. ೧೭ ರಂದು (ಇಂದು) ಕೊನೆಯ ದಿನವಾಗಿದೆ. ೧೮ ರಂದು ಪರಿಶೀಲನೆ, ೨೦ ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ, ೨೭ ರಂದು ಮತದಾನ, ಅವಶ್ಯವಿದ್ದಲ್ಲಿ ತಾ. ೨೯ ರಂದು ಮರು ಮತದಾನ, ತಾ. ೩೦ ರಂದು ಮತ ಎಣಿಕೆ ನಡೆಸಲು ಆಯೋಗ ತೀರ್ಮಾನಿಸಿದೆ.

ಸಭೆಯಲ್ಲಿ ಮೂಡದ ಒಮ್ಮತ: ಎರಡು ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಕೂತಿ ಗ್ರಾಮದಲ್ಲಿ ಗ್ರಾಮಸ್ಥರ ಸಭೆ ನಡೆದಿದ್ದು, ಚುನಾವಣೆಗೆ ಹೋಗಬೇಕೋ ಅಥವಾ ಅವಿರೋಧವಾಗಿ ಆಯ್ಕೆ ಮಾಡಬೇಕೋ ಎಂದು ಚರ್ಚಿಸಲಾಯಿತು. ಆದರೆ ಸಭೆಯಲ್ಲಿ ಅವಿರೋಧ ಆಯ್ಕೆಗೆ ಒಮ್ಮತ ಮೂಡದ ಹಿನ್ನೆಲೆ ನಾಮಪತ್ರ ಸಲ್ಲಿಕೆಯಾಗುತ್ತಿದೆ.