ಮಡಿಕೇರಿ, ಡಿ. ೧೫: ಕುಶಾಲನಗರದಲ್ಲಿ ಮುಂದಿನ ದಿನಗಳ ಸಾರಿಗೆ ಅವಶ್ಯಕತೆಗೆ ಅನುಗುಣವಾಗಿ ಸಾರಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬಸವನಹಳ್ಳಿ ಗ್ರಾಮದ ಸರ್ವೇ ನಂ ೧/೧ರಲ್ಲಿ ೪ ಎಕರೆ ನಿವೇಶವನ್ನು ಕ.ರಾ.ರ.ಸ.ನಿಗಮದ ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೇಳಿದ ಪ್ರಶ್ನೆಗೆ ಸಾರಿಗೆ ಸಚಿವ ಶ್ರೀರಾಮುಲು ಉತ್ತರಿಸಿದರು.

ಕೋವಿಡ್ ಪರಿಸ್ಥಿತಿ ಹಿನ್ನೆಲೆ ಅಭಿವೃದ್ಧಿ ಕಾರ್ಯಕ್ಕೆ ತೊಡಕು ಉಂಟಾಗಿದೆ. ಮುಂದಿನ ಸಾರಿಗೆ ಅವಶ್ಯಕತೆ ದೃಷ್ಟಿಯಿಂದ ಭೂಸ್ವಾಧೀನ ಮಾಡಿಕೊಂಡಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ಘಟಕ ನಿರ್ಮಾಣ ಕಾರ್ಯಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಕೊಡಗು ಜಿಲ್ಲೆಯ ಹಳೆಯ ಬಸ್‌ಗಳು ಕಾರ್ಯಾಚರಿಸುತ್ತಿವೆ. ಹಳೆ ಬಸ್ ಬದಲಾವಣೆಗೆ ಕೈಗೊಂಡ ಕ್ರಮದ ಬಗ್ಗೆ ರಂಜನ್ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಸಚಿವರು, ನಿಗಮದಲ್ಲಿ ಹಳೆಯ ಮತ್ತು ದೋಷಪೂರಿತ ವಾಹನಗಳನ್ನು ಗುರುತಿಸಿ ಆಗಿಂದಾಗ್ಗೆ ನಿಯುಕ್ತಿಗೊಳಿಸಲು ಕ್ರಮಕೈಗೊಂಡು ಹೊಸ ವಾಹನಗಳನ್ನು ಸೇರ್ಪಡೆ ಗೊಳಿಸಲಾಗಿರುತ್ತದೆ. ಮಡಿಕೇರಿ ಘಟಕಕ್ಕೆ ಕಳೆದ ಮೂರು ವರ್ಷಗಳಲ್ಲಿ ಒಟ್ಟು ೧೪ ಹೊಸ ವಾಹನಗಳು ಸೇರ್ಪಡೆಯಾಗಿವೆ. ದುರಸ್ತಿಪಡಿಸಲಾಗದ ೨೫ ವಾಹನಗಳನ್ನು ನಿರುಪಯುಕ್ತಗೊಳಿಸಲು ಕ್ರಮವಹಿಸಲಾಗಿದೆ ಎಂದು ಶ್ರೀರಾಮುಲು ಮಾಹಿತಿ ನೀಡಿದರು.

ಮಿನಿಬಸ್ ಪ್ರಸ್ತಾವನೆ ಇಲ್ಲ

ಕೊಡಗು ಜಿಲ್ಲೆಗೆ ಮಿನಿ ಬಸ್ ವ್ಯವಸ್ಥೆ ಕಲ್ಪಿಸಿದರೆ ಉತ್ತಮ ಎಂಬ ಸಲಹೆಯನ್ನು ರಂಜನ್ ನೀಡಿದರು. ಈ ಬಗ್ಗೆ ಮಾತನಾಡಿದ ಸಚಿವರು, ಬೆಟ್ಟ ಗುಡ್ಡ ಪ್ರದೇಶಗಳಿಂದ ಕೂಡಿದ ಕೊಡಗಿನಲ್ಲಿ ವಿರಳ ಮನೆಗಳು ಹಾಗೂ ಕಡಿಮೆ ಜನಸಂಖ್ಯೆ ಇದ್ದು, ಕಿರಿದಾದ ರಸ್ತೆಗಳನ್ನು ಹೊಂದಿದೆ. ಆ ಮಾರ್ಗಗಳಲ್ಲಿ ಮಿನಿ ಬಸ್ ಕಾರ್ಯಾಚರಿಸಿದಲ್ಲಿ ಅನುಕೂಲವಾಗುತ್ತದೆ. ಆದರೆ, ಕೊರೊನಾ ಪರಿಸ್ಥಿತಿ ಹಿನ್ನೆಲೆ ಸಾರಿಗೆ ಇಲಾಖೆಯಲ್ಲಿ ಆದಾಯ ಕೊರತೆ ಇದೆ. ಈ ಕಾರಣದಿಂದ ಮಿನಿ ಬಸ್ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.