ಕಣಿವೆ, ಡಿ. ೧೫: ಕಳೆದ ಬಾರಿ ಸುರಿದ ವ್ಯಾಪಕ ಮಳೆಯಿಂದಾಗಿ ಬರೆ ಕುಸಿತಗೊಂಡ ಗುಮ್ಮನಕೊಲ್ಲಿಯ ನಾಗಮ್ಮನ ಮಂಟಿ ಜನವಸತಿ ಪ್ರದೇಶಕ್ಕೆ ಪಂಚಾಯಿತಿ ಸದಸ್ಯರಾದ ಗಣೇಶ, ಮಣಿಕಂಠ, ಆಸಿಫ್ ಹಾಗೂ ಪಿಡಿಒ ಸುಮೇಶ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಬಳಿಕ "ಶಕ್ತಿ"ಯೊಂದಿಗೆ ಪ್ರತಿಕ್ರಿಯಿಸಿದ ಪಿಡಿಒ ಸುಮೇಶ್, ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಬರೆ ಕುಸಿತವಾಗಿರುವುದರಿಂದ ತಡೆಗೋಡೆ ನಿರ್ಮಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ. ಅದು ಪಂಚಾಯಿತಿಯಿAದ ಸಾಧ್ಯವಾಗದ ಕುರಿತು ಚುನಾಯಿತ ಪ್ರತಿನಿಧಿಗಳಿಗೂ ತಿಳಿದಿದೆ. ಆದಾಗ್ಯೂ ಸ್ಥಳೀಯ ನಿವಾಸಿಗಳ ಸುಗಮ ಸಂಚಾರದ ನಿಟ್ಟಿನಲ್ಲಿ ಎರಡು ಲಕ್ಷ ರೂ. ವೆಚ್ಚದಲ್ಲಿ ಮೊದಲ ಹಂತದ ತಡೆಗೋಡೆ ಕಾಮಗಾರಿ ನಡೆಸಬಹುದಾಗಿದೆ. ಈ ಬಗ್ಗೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬಹುದಾಗಿದೆ.

ಹಾಗೆಯೇ ಪಂಚಾಯಿತಿ ಅಭಿಯಂತರರ ಜೊತೆ ಮತ್ತೊಮ್ಮೆ ಸ್ಥಳ ಪರಿಶೀಲಿಸಿ ಶಾಸಕರ ಗಮನಕ್ಕೆ ತಂದು ಬೇರೆ ಅನುದಾನ ತಂದು ಇಲ್ಲಿನ ಜನರಿಗೆ ಹೆಚ್ಚಿನ ಅನುಕೂಲ ಒದಗಿಸಬಹುದಾಗಿದೆ ಎಂದು ತಿಳಿಸಿದರು.

ಈ ಜನವಸತಿ ಪ್ರದೇಶದಲ್ಲಿ ಬರೆ ಕುಸಿತಗೊಂಡ ಕಾರಣ ಸ್ಥಳೀಯ ನಿವಾಸಿಗಳು ಅನುಭವಿಸುತ್ತಿರುವ ನರಕಯಾತನೆ ಬಗ್ಗೆ ‘ಶಕ್ತಿ’ ಸಚಿತ್ರ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.