ಮಡಿಕೇರಿ, ಡಿ. ೧೫: ಲಾರಿ ಮಾಲೀಕರು ಮತ್ತು ಚಾಲಕರುಗಳಿಗೆ ವಿವಿಧ ಇಲಾಖೆಗಳಿಂದ ಕಿರುಕುಳ ವಾಗುತ್ತಿದ್ದು, ಇದರ ವಿರುದ್ಧ ತಾ. ೧೭ ರಂದು (ನಾಳೆ) ಪ್ರತಿಭಟನೆ ನಡೆಸುವುದಾಗಿ ಕೊಡಗು ಜಿಲ್ಲಾ ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಎಂ.ಎ. ಮಶೂದ್ ಮಹಮ್ಮದ್ ಮೆಟ್ರೊ ಹಾಗೂ ಗೌರವಾಧ್ಯಕ್ಷ ಪಿ.ಟಿ. ರಮೇಶ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರುಗಳು ಮಾತನಾಡಿದರು. ಕೊಡಗಿನಲ್ಲಿ ಪ್ರಕೃತಿ ವಿಕೋಪ ಹಾಗೂ ಕೊರೊನಾ ಲಾಕ್ಡೌನ್ನಿಂದಾಗಿ ಕೆಲಸಗಳಿಲ್ಲದೆ ಲಾರಿಗಳ ಮಾಲೀಕರು, ಚಾಲಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಇತ್ತೀಚಿನ ದಿನಗಳಲ್ಲಿ ಲಾರಿ ಮಾಲೀಕರು ಹಾಗೂ ಚಾಲಕರಿಗೆ ವಿನಾಕಾರಣ ವಿವಿಧ ಇಲಾಖೆಗಳು ತೊಂದರೆ ನೀಡುತ್ತಿದ್ದು, ಈ ಹಿನ್ನೆಲೆ ತಾ. ೧೭ ರಂದು (ನಾಳೆ) ಬೆಳಿಗ್ಗೆ ೧೦ ಗಂಟೆಗೆ ಸುದರ್ಶನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸಂಘದ ವತಿಯಿಂದ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರುಗಳು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಬಿ. ಶೇಖರ್ ಉಪಸ್ಥಿತರಿದ್ದರು.