ವೀರಾಜಪೇಟೆ, ಡಿ. ೧೫: ನವೆಂಬರ್ ತಿಂಗಳಲ್ಲಿ ಮನೆ ಸೇರಿದಂತೆ ಗ್ರಾಮ ಪಂಚಾಯಿತಿ ಹಾಗೂ ಅಂಚೆ ಕಚೇರಿಯಲ್ಲಿ ಕಳ್ಳತನವೆಸಗಿ ಪರಾರಿಯಾಗಿದ್ದ ಚೋರ ಮತ್ತು ಕಳ್ಳತನಕ್ಕೆ ಸಹಕಾರ ನೀಡಿದ ಕಳ್ಳರನ್ನು ಬಂಧಿಸುವಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ತಾಲೂಕು ಕದನೂರು ಗ್ರಾ.ಪಂ. ವ್ಯಾಪ್ತಿಯ ಚಾಮಿಯಾಲ ದೇವಣಗೇರಿ ನಿವಾಸಿ ಕರಿಯ ಎಂಬುವವರ ಪುತ್ರ ಹೆಚ್.ಕೆ ನವೀನ್, (ಪಾಪುಣ್ಣಿ- ಮಹೇಶ್- ೩೯) ಮತ್ತು ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಣ ಗ್ರಾಮದ ನಿವಾಸಿ ಮಂದಣ್ಣ ಎಂಬವರ ಪುತ್ರ ಕಡೆಮಾಡ ಎಂ. ನವೀನ್ ಕಾರ್ಯಪ್ಪ (೪೬)ಕಳವು ಪ್ರಕರಣದಲ್ಲಿ ಬಂಧಿತ ಆರೋಪಿಗಳು.
ಹಲವು ಕಳವು ಪ್ರಕರಣದಲ್ಲಿ ಭಾಗಿ ಎನ್ನಲಾದ ಹಾಗೂ ಇತ್ತೀಚೆಗೆ ಪ್ರಕರಣ ವೊಂದರಲ್ಲಿ ಬಿಡುಗಡೆ ಹೊಂದಿ ಗ್ರಾಮಕ್ಕೆ ಆಗಮಿಸಿದ್ದ ಪಾಪುಣ್ಣಿ ಜೈಲಿನಿಂದ ಬಿಡುಗಡೆ ಹೊಂದಿ ಕೆಲವೇ ದಿನಗಳಲ್ಲಿ ತನ್ನ ಕೈಚಳಕ ತೋರಿದ್ದಾನೆ. ಜೈಲಿನಿಂದ ಬಂದ ಪಾಪುಣ್ಣಿ ತಾ. ೧೫.೧೧.೨೦೨೧ ರಂದು ರಾತ್ರಿ-ಮುಂಜಾನೆಯ ಮಧ್ಯಭಾಗದಲ್ಲಿ ಕದನೂರು ಗ್ರಾಮ ಪಂಚಾಯಿತಿ ಕಚೇರಿಯ ಬೀಗ ಮುರಿದು ಒಳ ನುಗ್ಗಿ ಕಚೇರಿಯಲ್ಲಿ ಬಳಸುತ್ತಿದ್ದ ಗಣಕಯಂತ್ರದ ಮಾನೀಟರ್ ಮತ್ತು ಕಚೇರಿಗೆ ಅಳವಡಿಸಲಾದ ಸಿ.ಸಿ. ಕ್ಯಾಮರಾವನ್ನು ಕಳವು ಮಾಡಿದ್ದಾನೆ. ಸನಿಹದ ಅಂಚೆ ಕಚೇರಿಯ ಬೀಗ ಮುರಿದು ಕಚೇರಿಯಲ್ಲಿದ್ದ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದ.
ನಂತರ ಚಾಮಿಯಾಲ ಗ್ರಾಮದಲ್ಲಿ ಯಾರೂ ಇಲ್ಲದ ಮನೆಯನ್ನು ಗುರುತಿಸಿಕೊಂಡು ತಾ. ೧೭.೧೧.೨೦೨೧ರ ರಾತ್ರಿ ದಿ. ಇಕ್ಬಾಲ್ ಹಸನ್ ಎಂಬವರ ಮನೆಗೆ ಕನ್ನ ಹಾಕಿ ಹಸನ್ ಅವರ ಪತ್ನಿಯ ಕಪಾಟಿನಲ್ಲಿದ್ದ ೯ ಗ್ರಾಂ. ತೂಕದ ಒಂದು ಚಿನ್ನದ ಬಳೆ, ೪೦ ಗ್ರಾಂ. ತೂಕದ ಚಿನ್ನದ ಕೊಕ್ಕೆತಾತಿ, ೮ ಗ್ರಾಂ. ತೂಕದ ೩ ಉಂಗುರ, ೭ ಗ್ರಾಂ. ತೂಕದ ಚಿನ್ನದ ಕಿವಿಯ ಓಲೆ ಸೇರಿದಂತೆ ೬೪ ಗ್ರಾಂ. ತೂಕದ ಚಿನ್ನಾಭರಣಗಳನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದ.
ಕಳವು ಆರೋಪಿಯ ಜಾಡು ಹಿಡಿದ ಪೊಲೀಸರು ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿ ತನಿಖೆ ಕೈಗೊಳ್ಳಲಾಗಿತ್ತು. ತಾ. ೧೪ ರಂದು ಸಂಜೆ ೬ರ ಸಮಯದಲ್ಲಿ ಬಿ.ಶೆಟ್ಟಿಗೇರಿ ಕೊಂಗಣ ಗ್ರಾಮದ ನವೀನ್ ಮನೆಯ ಸನಿಹದಲ್ಲಿ ಈರ್ವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಅಂದಾಜು ೨,೨೪,೦೦೦ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿ ಸಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ನಿರ್ದೇಶನದಲ್ಲಿ ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕರ ಮಾರ್ಗದÀರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ಹಾಗೂ ವೀರಾಜಪೇಟೆ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕ ಸಿದ್ಧಲಿಂಗ ಬಿ ಬಾಣಸೆ ಮತ್ತು ಸಿಬ್ಬಂದಿಗಳಾದ ನಗರ ಠಾಣೆಯ ಗಿರೀಶ್, ಮುಸ್ತಾಫ, ಟಿ.ಟಿ. ಮಧು, ವೃತ್ತ ನಿರೀಕ್ಷಕ ಕಚೇರಿಯ ಸಿಬ್ಬಂದಿ ಟಿ.ಕೆ. ರವಿ, ಗ್ರಾಮಾಂತರ ಠಾಣೆಯ ರಾಮಪ್ಪ, ಶ್ರೀಕಾಂತ್ ಕೆಂದೂರ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ