ಕಣಿವೆ, ಡಿ. ೧೩: ನಾಗಾಲೋಟದ ಬೆಳವಣಿಗೆಯಲ್ಲಿರುವ ಕುಶಾಲನಗರ ಪಟ್ಟಣದ ಕೂಗಳತೆ ದೂರದಲ್ಲಿ ಸರ್ಕಾರದ ಕನಿಷ್ಟ ಮೂಲಸೌಲಭ್ಯಗಳಿಲ್ಲದ ಜನವಸತಿ ಪ್ರದೇಶವೊಂದಿದ್ದು ಅಲ್ಲಿನ ಜನರ ದೈನಂದಿನ ಸ್ಥಿತಿ ನಿಜಕ್ಕೂ ನರಕ ಸಂಚಾರವಾಗಿದೆ. ಕುಶಾಲನಗರದ ಸೆರಗಿನಲ್ಲಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ನಾಗಮ್ಮನ ಮಂಟಿ ಎಂಬ ಜನವಸತಿ ಪ್ರದೇಶದಲ್ಲಿ ಬರೆಕುಸಿತವಾದ ಪರಿಣಾಮ ನಿವಾಸಿಗಳು ತಮ್ಮ ತಮ್ಮ ಮನೆಗಳಿಗೆ ತೆರಳಲು ಪರದಾಡುವ ಸ್ಥಿತಿ ನೋಡಿದರೆ ಎಂತಹವರಿಗೂ ಮರುಕ ಉಂಟಾಗುತ್ತದೆ.
ನಿವೇಶನ ಹಾಗೂ ಸೂರುಗಳಿಂದ ವಂಚಿತರಾದ ಬಡಕುಟುಂಬಗಳ ೩೬ಕ್ಕೂ ಹೆಚ್ಚಿನ ಕುಟುಂಬಗಳು ಕಳೆದ ಹದಿನೈದು ವರ್ಷಗಳ ಹಿಂದೆ ಗುಡ್ಡ ಪ್ರದೇಶವಾಗಿರುವ ಈ ನಾಗಮ್ಮನ ಮಂಟಿಯಲ್ಲಿ ಗುಡಿಸಲು ನಿರ್ಮಿಸಿ, ಪ್ಲಾಸ್ಟಿಕ್ ಹೊದಿಸಿಕೊಂಡು ವಾಸವಿದ್ದವು.
ಕ್ರಮೇಣ ಸ್ಥಳೀಯ ಗ್ರಾಮ ಪಂಚಾಯಿತಿ ಈ ಸೂರುಗಳಲ್ಲಿ ವಾಸವಿರುವ ನಿರ್ಗತಿಕರನ್ನು ಮಾನ್ಯ ಮಾಡಿ ಅವರಿಗೆ ಕುಡಿಯುವ ನೀರು ಹರಿಸಿತು. ಮುಖ್ಯರಸ್ತೆಯಿಂದ ನಾಗಮ್ಮನ ಮಂಟಿಯವರೆಗೂ ಇರುವ ಸಂಪರ್ಕ ರಸ್ತೆಯನ್ನು ಒಂದಷ್ಟು ಅಭಿವೃದ್ಧಿ ಕೂಡ ಮಾಡಿದೆ. ಜೊತೆಗೆ ಒಂದಿಷ್ಟು ರಾತ್ರಿ ಬೆಳಗುವ ಸೋಲಾರ್ ದೀಪಗಳ ವ್ಯವಸ್ಥೆಯನ್ನು ಕಲ್ಪಿಸಿದೆ.
ಆದರೆ, ಅತಿ ಮುಖ್ಯವಾಗಿ ಮನೆಗಳಿಗೆ ತೆರಳಲು ಬೇಕಾದ ದಾರಿಯೇ ಇಲ್ಲ. ಕಿಷ್ಕಿಂಧೆಯAತಿದ್ದ ದಾರಿಗಳ ಬದಿಯಲ್ಲಿ ಅಲ್ಲಲ್ಲಿ ಬರೆಕುಸಿತವಾಗಿರುವ ಕಾರಣ ನಿವಾಸಿಗಳಿಗೆ ದಾರಿ ಭೀಕರವಾದ ಸಮಸ್ಯೆಯಾಗಿದೆ.
ಕಳೆದ ಹಲವು ವರ್ಷಗಳಿಂದ ದಾರಿ ಸಮಸ್ಯೆಯನ್ನು ಎದುರಿಸುತ್ತಿರುವ ಇಲ್ಲಿನ ನಿವಾಸಿಗಳು ಸ್ಥಳೀಯ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದರೂ ಕೂಡ ಇದೂವರೆಗೂ ಪಂಚಾಯಿತಿಯ ಅಧಿಕಾರಿಗಳಾಗಲೀ, ಚುನಾಯಿತ ಪ್ರತಿನಿಧಿಗಳಾಗಲೀ ಇತ್ತ ಗಮನಹರಿಸುತ್ತಲೇ ಇಲ್ಲ ಎಂದು ಇಲ್ಲಿನ ವಯೋವೃದ್ಧ ನಿವಾಸಿಗಳಾದ ೭೩ ರ ಪ್ರಾಯದ ಫಾತಿಮಾ, ೮೦ರ ಪ್ರಾಯದ ಅಬ್ದುಲ್ ರೆಹಮಾನ್ ನೊಂದು ನುಡಿಯುತ್ತಾರೆ.
ನಾವುಗಳು ರಸ್ತೆಯಿಂದ ಮನೆಗಳಿಗೆ ಸಿಲಿಂಡರ್, ಶುದ್ಧ ಕುಡಿಯುವ ನೀರಿನ ಕ್ಯಾನ್ಗಳನ್ನು ಹೊತ್ತು ತರಲು ಸಾಧ್ಯವಾಗುತ್ತಿಲ್ಲ. ಅನಾರೋಗ್ಯಕ್ಕೆ ತುತ್ತಾದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಗುವುದೇ ಇಲ್ಲ. ಸ್ವಾಮಿ, ರೇಖಾ ಎಂಬವರ ಮನೆಯ ಮುಂಬದಿಯ ದಾರಿಯಲ್ಲಿ ಬರೆ ಕುಸಿದದ್ದರಿಂದ ಒಬ್ಬ ವ್ಯಕ್ತಿ ತಿರುಗಾಡಲು ಅಸಾಧ್ಯ. ಅಂತಹುದರಲ್ಲಿ ಬೇರೆಯವರನ್ನು ಹೊತ್ತು ಸಾಗಿಸಲು ಸಾಧ್ಯವೇ ಇಲ್ಲ ಎಂದು ಸ್ಥಳೀಯ ನಿವಾಸಿಗಳಾದ ರೇಖಾ, ಸಣ್ಣಮ್ಮ, ಪ್ರವೀಣ ಮೊದಲಾದವರು ಅಲ್ಲಿನ ನಿತ್ಯದ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸುತ್ತಾರೆ.
ಇದೇ ಜನವಸತಿ ಪ್ರದೇಶದಲ್ಲಿ ಸಾಬು ಎಂಬ ವ್ಯಕ್ತಿ ಮೊನ್ನೆಯಷ್ಟೇ ಸಾವಿಗೀಡಾದ ಸಂದರ್ಭ ಅವರ ಅಂತ್ಯಕ್ರಿಯೆ ನೆರವೇರಿಸಲು ದಾರಿಯಿಲ್ಲದ ಕಾರಣ ಕಿಷ್ಕಿಂಧೆಯAತಿರುವ ದಾರಿಯಲ್ಲಿ ಬಹಳ ಕಷ್ಟದಿಂದ ಇಬ್ಬರು ವ್ಯಕ್ತಿಗಳು ಹೊತ್ತು ಸಾಗಿಸಿ ಅಂತ್ಯಕ್ರಿಯೆ ನಡೆಸಿದ್ದು ಮಾತ್ರ ವ್ಯವಸ್ಥೆಯ ದುರಂತ.
ಕೂಡಲೇ ಇಲ್ಲಿನ ವಾಸಿಗಳನ್ನು ಮನುಷ್ಯರಂತೆ ಕಾಣುವ ಮೂಲಕ ಸ್ಥಳೀಯ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಚುನಾಯಿತ ಸದಸ್ಯರು ಹಾಗೂ ಅಧಿಕಾರಿಗಳು ದಾರಿ ಸಮಸ್ಯೆಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದೆ.
- ಕೆ.ಎಸ್. ಮೂರ್ತಿ, ಕುಶಾಲನಗರ.