ರಾಜ್ಯದಲ್ಲಿ ಕೊರೊನಾದಿಂದ ಏಳು ಸಾವು
ಬೆಂಗಳೂರು, ಡಿ. ೧೩: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ ೨೪ ಗಂಟೆಯಲ್ಲಿ ೨೩೬ ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೩೦,೦೦೬೭೧ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮಹಾಮಾರಿ ಕೊರೊನಾದಿಂದ ಇಂದು ಏಳು ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ ೩೮೨೬೮ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೧೨೧ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೫೯,೦೨೫ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ ಕೊರೊನಾದಿಂದ ಮೂವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ರಾಜ್ಯದಲ್ಲಿ ೩೨೧ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೯,೫೫,೧೩೮ಕ್ಕೆ ಏರಿಕೆಯಾಗಿದೆ. ೭೨೩೬ ಸಕ್ರಿಯ ಪ್ರಕರಣಗಳಿವೆ.
ಬೆಳಗಾವಿ ಅಧಿವೇಶನ: ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ, ಅಪ್ಪುಗೆ ಪದ್ಮಶ್ರೀಗೆ ಶಿಫಾರಸು
ಬೆಳಗಾವಿ, ಡಿ. ೧೩: ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಚಳಿಗಾಲ ಅಧಿವೇಶನದ ಮೊದಲ ದಿನದ ಕಲಾಪ ಆರಂಭವಾಗುತ್ತಿದ್ದAತೆ ಸ್ಪೀಕರ್ ಕಾಗೇರಿ ಮೊದಲನೆಯದಾಗಿ ಸದನದ ಸಂಪ್ರದಾಯದAತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕೈಗೆತ್ತಿಕೊಂಡರು. ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸದನದಲ್ಲಿ ಗಣ್ಯರು ಸಂತಾಪ ಸೂಚಿಸಿ ಮೌನಾಚರಿಸಿದರು. ಪುನೀತ್ ರಾಜ್‌ಕುಮಾರ್ ಸಂತಾಪದ ಮೇಲೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಚಿತ್ರರಂಗ ಸೇರಿದಂತೆ ಸಹಸ್ರಾರು ಅಭಿಮಾನಿಗಳನ್ನು ಅಗಲಿರುವ ಸ್ಯಾಂಡಲ್‌ವುಡ್‌ನ ಅಪ್ಪುಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಸಿಎಂ ಬೊಮ್ಮಾಯಿ ಕೆಳಮನೆಯ ಸದನಕ್ಕೆ ಭರವಸೆ ನೀಡಿದರು. ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತೇವೆ. ವಿರೋಧ ಪಕ್ಷದವರು ಕೂಡ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಪತ್ರ ಬರೆದಿದ್ದರು. ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯ ಇದೆ ಅನಿಸುತ್ತಿದೆ. ಪುನೀತ್ ರಾಜಕುಮಾರ್ ವಿಚಾರದಲ್ಲೂ ಹಾಗೆಯೇ ಆಗಿದೆ. ಪುನೀತ್ ಮರಣ ಆಘಾತವಾಗಿದೆ. ಯಾರೂ ಹೀಗೆ ಸಾವನ್ನು ನಿರೀಕ್ಷೆ ಮಾಡಿರಲಿಲ್ಲ. ಕಾನೂನು ಸುವ್ಯವಸ್ಥೆ ದೊಡ್ಡ ಸವಾಲಾಗಿತ್ತು. ರಾಜಕುಮಾರ್ ನಿಧನದ ವೇಳೆ ಆದಂತಹ ಕಹಿ ಘಟನೆಗಳು ನಡೆಯಬಾರದು ಎಂದು ಮುನ್ನೆಚ್ಚರಿಕೆಯಿಂದ ಜನರ ಸಹಕಾರ, ಪೊಲೀಸರ ಸಹಕಾರದಿಂದ ಎಲ್ಲವೂ ವ್ಯವಸ್ಥಿತವಾಗಿ ನಡೆಯಿತು ಎಂದರು. ಈಗಾಗಲೇ ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ, ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದ ದಿನಾಂಕವನ್ನು ಶೀಘ್ರ ಪ್ರಕಟ ಮಾಡುವುದಾಗಿ ಹೇಳಿದರು.
ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದ ಮೋದಿ
ವಾರಣಾಸಿ, ಡಿ. ೧೩ : ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಕಾರಿಡಾರ್‌ನ್ನು ಉದ್ಘಾಟಿಸಿದ್ದು, ಗಂಗಾ ನದಿಯಲ್ಲಿ ಮಿಂದು ವಿಶ್ವನಾಥ ಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರು, ಸಂತರು, ಗಣ್ಯರನ್ನುದ್ದೇಶಿಸಿ ಮಾತನಾಡಿದರು. ಭೋಜ್ ಪುರಿ ಭಾಷೆಯಲ್ಲಿ ತಮ್ಮ ಭಾಷಣ ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಈ ವೈಭವೋಪೇತ ಕಾರಿಡಾರ್‌ನ್ನು ನಿರ್ಮಿಸಿರುವ ಎಲ್ಲಾ ಕಾರ್ಮಿಕರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದ್ದಾರೆ. ಕೋವಿಡ್-೧೯ ಸಾಂಕ್ರಾಮಿಕದ ಅವಧಿಯಲ್ಲೂ ಕಾರಿಡಾರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳ್ಳಲಿಲ್ಲ ಎಂದು ಮೋದಿ ತಿಳಿಸಿದ್ದಾರೆ. ಈ ಹಿಂದೆ ದೇವಾಲಯದ ಪ್ರಾಂಗಣ ಕೇವಲ ೩,೦೦೦ ಚದರ ಅಡಿಯಷ್ಟಿತ್ತು. ಈಗ ೫ ಲಕ್ಷ ಚದರ ಅಡಿಯಷ್ಟಾಗಿದೆ. ೫೦,೦೦೦-೭೫,೦೦೦ ಮಂದಿ ಭಕ್ತಾದಿಗಳು ದೇವಾಲಯ ಹಾಗೂ ದೇವಾಲಯದ ಪ್ರಾಂಗಣಕ್ಕೆ ಏಕಕಾಲದಲ್ಲಿ ಬರಬಹುದಾಗಿದೆ ಎಂದು ಮೋದಿ ಹೇಳಿದ್ದಾರೆ.
ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ
ಪಟ್ಟಭದ್ರ ಹಿತಾಸಕ್ತಿಗಳು ವಾರಣಾಸಿಯ ಬಗ್ಗೆ ಆರೋಪಗಳನ್ನು ಹರಡುತ್ತಿದ್ದರು. ಕಾಶಿಯಲ್ಲಿರುವುದು ಒಂದೇ ಸರ್ಕಾರ ಅದು ಕೈಲಿ ಢಮರು ಹಿಡಿದಿರುವ ವಿಶ್ವನಾಥನ ಸರ್ಕಾರ, ಮಹಾದೇವನ ಇಚ್ಛೆ ಇಲ್ಲದೇ ಇಲ್ಲಿಗೆ ಯಾರೂ ಬರಲು ಸಾಧ್ಯವಿಲ್ಲ. ಇಲ್ಲಿ ಏನೇ ಆದರೂ ಅದನ್ನು ಮಹಾದೇವನೇ ಮಾಡಿಸುತ್ತಾನೆ. "ವಾರಣಾಸಿ ಹಲವು ದಾಳಿಗಳನ್ನು ಎದುರಿಸಿ ಕಾಲದಿಂದ ನಿಂತಿದೆ. ಹಲವು ಸುಲ್ತಾನರು ಬಂದು ಹೋಗಿರುವುದನ್ನು ಕಂಡಿದೆ. ಔರಂಗ್ ಜೇಬ್ ಸಂಸ್ಕೃತಿಯನ್ನು ನಾಶ ಮಾಡಲು ಯತ್ನಿಸಿದ. ಆದರೆ ಈ ದೇಶ ಬೇರೆ ದೇಶಗಳಿಗಿಂತಲೂ ಭಿನ್ನವಾದದ್ದು, ಓರ್ವ ಔರಂಗಜೇಬ ಬಂದಾಗಲೆಲ್ಲಾ ಓರ್ವ ಶಿವಾಜಿ ತಲೆ ಎತ್ತಿ ನಿಲ್ಲುತ್ತಾರೆ. ೧೭೦೦ ರಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅವರು ದೇವಾಲಯವನ್ನು ಪುನರ್‌ನಿರ್ಮಾಣ ಮಾಡಿದಾಗ ಕಾಶಿಯಲ್ಲಿ ಹೆಚ್ಚಿನ ಕಾಮಗಾರಿಗಳು ನಡೆದಿದ್ದವು" ಎಂದು ಮೋದಿ ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿ ಬಸ್ ಮೇಲೆ ಉಗ್ರರ ದಾಳಿ : ಇಬ್ಬರು ಸಾವು, ೧೨ ಮಂದಿಗೆ ಗಾಯ
ಶ್ರೀನಗರ, ಡಿ. ೧೩: ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪೊಲೀಸ್ ಸಿಬ್ಬಂದಿ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಇಬ್ಬರು ಸಾವನ್ನಪ್ಪಿದ್ದು, ೧೨ ಮಂದಿಗೆ ಗಾಯಗಳಾಗಿವೆ. ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪೊಲೀಸ್ ಸಿಬ್ಬಂದಿ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದು, ೧೪ ಮಂದಿಗೆ ಗಾಯಗಳಾಗಿವೆ. ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಸಂಜೆ ವೇಳೆ ಪಂಥಾ ಚೌಕ್ ಬಳಿಯ ಝೆವಾನ್ ನಲ್ಲಿ ಈ ದಾಳಿ ನಡೆದಿದ್ದು, ೧೪ ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನಾ ಪ್ರದೇಶವನ್ನು ಸಂಪೂರ್ಣ ಪೊಲೀಸ್, ಭದ್ರತಾ ಸಿಬ್ಬಂದಿಗಳು ಸುತ್ತುವರೆದಿದ್ದು, ಉಗ್ರರನ್ನು ಹಿಡಿಯಲು ಶೋಧಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.