ಮುಳ್ಳೂರು : ಡಿ. ೧೩ : ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತದ ರಕ್ಷಣಾ ವಿಭಾಗಗಳ ಮುಖ್ಯಸ್ಥ ಸಿ.ಡಿ.ಎಸ್ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಸೇರಿದಂತೆ ದುರಂತದಲ್ಲಿ ಮಡಿದ ೧೩ ಮಂದಿ ಸೈನಿಕ ಅಧಿಕಾರಿಗಳಿಗೆ ಶನಿವಾರಸಂತೆ ಪಟ್ಟಣ ಸೇರಿದಂತೆ ವಿವಿಧ ಕಡೆಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶನಿವಾರಸಂತೆ ಪಟ್ಟಣದ ನಿವೃತ್ತ ಸೈನಿಕರ ಸಂಘ ಮತ್ತು ಗ್ರಾ.ಪಂ.ವತಿಯಿAದ ನಿವೃತ್ತ ಸೈನಿಕ ಸಂಘದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ನಿವೃತ್ತ÷ಸೈನಿಕರ ಸಂಘದ ಅಧ್ಯಕ್ಷ ಎ.ಎಸ್.ಮಹೇಶ್, ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಸರೋಜ ಶೇಖರ್ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಎಸ್.ಎನ್.ರಘು ನಿವೃತ್ತ ಸೈನಿಕ ಸಂಘದ ಪ್ರಮುಖರಾದ ಎಸ್.ಎನ್.ಪಾಂಡು, ಕೆ.ಡಿ.ಚಂದ್ರಪ್ಪ, ಬಿ.ಡಿ.ಪರಮೇಶ್, ಕೆ.ಪಿ.ತಿಮ್ಮಯ್ಯ, ಬಿ.ಆರ್.ಆನಂದ್, ಬಿ.ಎ.ಲೋಕೇಶ್, ಎಂ.ಕೆ.ಗಿರೀಶ್, ಎಸ್.ನಾಗರಾಜು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ಮಾಲಂಬಿ ಗ್ರಾಮದ ಹಿಂದೂ ಜಾಗರಣ ವೇದಿಕೆ ಮತ್ತು ಯುವಕರ ತಂಡ ಮತ್ತು ಗ್ರಾಮಸ್ಥರ ವತಿಯಿಂದ ಸಂತಾಪ ಸೂಚಿಸಲಾಯಿತು. ಮಡಿದ ಯೋಧರಿಗೆ ೧ ನಿಮಿಷ ಮೌನಾಚರಣೆ ಸಲ್ಲಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿಂದೂ ಜಾಗರಣಾ ವೇದಿಕೆಯ ತಾಲೂಕು ಕಾರ್ಯದರ್ಶಿ ರಂಜನ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಮಾಲಂಬಿ ಶಾಖೆಯ ಕಾರ್ಯಕರ್ತರು, ಗ್ರಾಮದ ನಿವೃತ್ತ ಸೈನಿಕರು, ಯುವಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮಡಿಕೇರಿಯ ನಗರದ ತನಲ್ ಆಶ್ರಮದಲ್ಲಿ ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಮರಣ ಹೊಂದಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ ಮರಣ ಹೊಂದಿದ ಎಲ್ಲಾ ಸೈನಿಕರಿಗೆ ಮೌನಾಚರಣೆಯೊಂದಿಗೆ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ತನಲ್ ಸಂಸ್ಥೆಯ ಅಧ್ಯಕ್ಷ ಎಂ.ಹೆಚ್ ಮೊಹಮ್ಮದ್, ಮುಸ್ತಫಾ, ಕೆ.ಟಿ ಬೇಬಿ ಮ್ಯಾಥ್ಯೂ, ಅಝ್ಗರ್, ಫಯಾಝ್ ಹಾಗೂ ಪೀಟರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು. ಮಡಿಕೇರಿ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಜನರಲ್ ಬಿಪಿನ್ ರಾವತ್, ಅವರ ಧರ್ಮಪತ್ನಿ ಮಧುಲಿಕ ರಾವತ್ ಒಳಗೊಂಡAತೆ ಹನ್ನೊಂದು ಮಂದಿ ವೀರ ಯೋಧರ ಆತ್ಮಕ್ಕೆ ಶಾಂತಿ ಕೋರಿ ಶ್ರಮದಾನ ಮಾಡುವ ಮೂಲಕ ವಿಭಿನ್ನವಾಗಿ ಸಂತಾಪ ಸೂಚಿಸಲಾಯಿತು. ಮಡಿಕೇರಿ ನಗರದ ಅಶ್ವಿನಿ ಆಸ್ಪತ್ರೆ ಮುಂಭಾಗ ಸೇರಿದ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಆಸ್ಪತ್ರೆ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ಶುಚಿತ್ವಕ್ಕೆ ಒತ್ತು ನೀಡುವ ಮೂಲಕ ರಾಷ್ಟೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸಂಗಡಿಗರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಶ್ರದ್ಧಾಂಜಲಿಯ ಸಭಾ ಕಾರ್ಯಕ್ರಮ ವನ್ನುದ್ದೇಶಿಸಿ ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಪಿ. ಮಾತನಾಡಿದರು. ಕಾರ್ಯಕ್ರಮದಲ್ಲಿ ವಿ.ಹಿ.ಪ. ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ರಮೇಶ್ ಪುದಿಯೊಕ್ಕಡ, ಬಜರಂಗದಳ ಸಂಯೋಜಕ ಅನಿಶ್ ಕುಶಾಲನಗರ, ಸಹ ಸಂಯೋಜಕ ವಿವೇಕ್ ರೈ, ದುರ್ಗವಾಹಿನಿ ಸಂಯೋಜಕಿ ಅಂಬಿಕ, ಭಜರಂಗದಳ ಜಿಲ್ಲಾ ಗೋರಕ್ಷ ಪ್ರಮುಖ್ ಶಿವ ಸ್ವಾಮಿ, ಕುಶಾಲನಗರ ತಾಲೂಕು ವಿ.ಹಿ.ಪ. ಉಪಾಧ್ಯಕ್ಷ ಬಾಲಕೃಷ್ಣ, ಮಡಿಕೇರಿ ನಗರಾಧ್ಯಕ್ಷ ಶ್ರೀನಿವಾಸ್ ಮೂರ್ತಿ ಹಾಗೂ ವಿ.ಹಿ.ಪ, ಬಜರಂಗದಳ ಸಂಘಟನೆಗಳ ಐವತ್ತಕ್ಕೂ ಹೆಚ್ಚಿನ ಪ್ರಮುಖ ಕಾರ್ಯಕರ್ತರು ಹಾಗೂ ಅಶ್ವಿನಿ ಆಸ್ಪತ್ರೆ ಟ್ರಸ್ಟಿಗಳಾದ ಟಿ.ಆರ್ ಶಣೈ ಮತ್ತು ಸತೀಶ್ ಉಪಸ್ಥಿತರಿದ್ದರು

ವೀರಾಜಪೇಟೆ : ಇಲ್ಲಿನ ಸಂತ ಅನ್ನಮ್ಮ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಹಾಗೂ ಪರಮ ಪ್ರಸಾದದ ಆರಾಧನಾ ಕಾರ್ಯಕ್ರಮ ನಡೆಸಲಾಯಿತು. ದೇವಾಲಯದ ಪ್ರಧಾನ ಧರ್ಮಗುರುಗಳಾದ ರೆ. ಫಾ. ಮದಲೈ ಮುತ್ತು ರವರು ವಿಶೇಷ ಪೂಜೆಯನ್ನು ಸಲ್ಲಿಸಿ ಮೃತ ಸೈನ್ಯಾಧಿಕಾರಿ ಗಳ ಆತ್ಮ ಶಾಂತಿಗಾಗಿ ಪ್ರಾರ್ಥಿಸಿದರು. ಗಾಯನ, ದೇವರ ನಾಮಾವಳಿ ಯನ್ನು ಸ್ತುತಿಸುತ್ತ ಪರಮ ಪ್ರಸಾದವನ್ನು ಆರಾಧಿಸಲಾಯಿತು. ಈ ಸಂದರ್ಭ ದಲ್ಲಿ ಬೈಬಲ್ ವಾಚನ ಹಾಗೂ ಭಕ್ತಾದಿಗಳೆಲ್ಲರೂ ಮೇಣದ ಬತ್ತಿಯನ್ನು ಬೆಳಗಿಸಿ ಮೌನಾಚರಣೆಯನ್ನು ಮಾಡಿದರು. ಶ್ರೀಮಂಗಲ: ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಅಪಘಾತ ದಲ್ಲಿ ಮೃತಪಟ್ಟ ಬಿಪಿನ್ ರಾವತ್ ಹಾಗೂ ಇತರ ೧೩ ಸೇನಾ ಅಧಿಕಾರಿಗಳಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕ ಹಾಗೂ ಪೊನ್ನಂಪೇಟೆ ಮಾಜಿ ಸೈನಿಕರ' ಸಂಘದಿAದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕ ಅಧ್ಯಕ್ಷ ಕೊಟ್ಟ್ಕತ್ತಿರ ಸೋಮಣ್ಣ, ಸಂಚಾಲಕ ಬಲ್ಯಮಿದೇರೀರ ಸಂಪತ್, ಬೊಟ್ಟಂಗಡ ಜಪ್ಪು, ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಸುಬ್ರಮಣಿ, ಕಾರ್ಯದರ್ಶಿ ಪೆಮ್ಮಂಡ ಶ್ಯಾಮ್‌ಪ್ರಸಾದ್, ಉಪಾಧ್ಯಕ್ಷ ಚೆಕ್ಕೆರ ರಮೇಶ್, ಸಹಕಾರ್ಯದರ್ಶಿ ಐನಂಡ ಬೇಬಿ, ಮತ್ತಿತರ ಪ್ರಮುಖರು ಹಾಗೂ ಮಾಜಿ ಸೈನಿಕರು ಭಾಗವಹಿಸಿದ್ದರು. ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಭಾರ ಉಪನಿರೀಕ್ಷಕ ಶೆಟ್ಟಿಯವರು ಹಾಜರಿದ್ದರು. ಐನಂಡ ಸುಬ್ರಮಣಿ ಮಾತನಾಡಿದರು.