ಮಡಿಕೇರಿ, ಡಿ. ೭: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟ ಕಾರ್ಯಕ್ರಮ ತಾ. ೧೨ ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦ ಗಂಟೆಗೆ ಕಾಲೇಜು ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಹಾವೀರ ಚಕ್ರ ಪುರಸ್ಕೃತ ಲೆ. ಕ. ಪುಟ್ಟಿಚಂಡ ಎಸ್. ಗಣಪತಿ, ನಿವೃತ್ತ ಡಿ.ಸಿ.ಪಿ. ಬಾಚಮಂಡ ಎ. ಪೂಣಚ್ಚ ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಮಡಿಕೇರಿ ದಂತ ವೈದ್ಯ ಡಾ. ಎಂ. ಅನಿಲ್ ಚೆಂಗಪ್ಪ ಉಪಸ್ಥಿತರಿರುವರು ಎಂದರು.
ಕಾರ್ಯಕ್ರಮದಲ್ಲಿ ೨ನೇ “ಸ್ಮರಣ ಸಂಚಿಕೆ”ಯನ್ನು ಬಿಡುಗಡೆ ಮಾಡಲಾಗುವುದು. ಸಂತೋಷ ಕೂಟದ ಪ್ರಯುಕ್ತ ಸಂಘದ ಸದಸ್ಯರಿಗೆ ಕ್ರೀಡಾಕೂಟವನ್ನು ಕೂಡ ಆಯೋಜಿಸಲಾಗಿದೆ. ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಅಹಲ್ಯಾ ಅಪ್ಪಚ್ಚು ಹಾಗೂ ನಿಖಿಲ್ ಅವರನ್ನು ಸನ್ಮಾನಿಸಿ ಗೌರವಿಸ ಲಾಗುವುದು. ಕೋವಿಡ್ ಸಂದರ್ಭ ಆನ್ಲೈನ್ ಮೂಲಕ "ಕೋವಿಡ್" ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಗುವುದು. ಪ್ರಥಮ ಎಲ್.ವೈ. ದಿಲೀಪ್, ದ್ವಿತೀಯ ಎಸ್.ಎಂ. ರಚನಾ, ಜಿ.ಎಂ. ವೇದಶ್ರೀ, ಸಿ.ಟಿ. ಯಶಸ್ವಿ ಹಾಗೂ ತೃತೀಯ ಬಹುಮಾನವನ್ನು ಅವಿನಾಶ್, ಎಂ.ಆರ್. ಹೇಮಾವತಿ, ಅರ್ಪಿತ ಡಿ.ರೈ ಗಳಿಸಿದ್ದಾರೆ ಎಂದರು.
ಹಳೆ ವಿದ್ಯಾರ್ಥಿಗಳ ಸಂಘದಿAದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಟ್ಟಡ ನಿರ್ಮಾಣ ಮಾಡಿ ಕೊಡುವ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಮಹಾಸಭೆಯಲ್ಲಿ ಇದರ ಅಗತ್ಯತೆಯ ಬಗ್ಗೆ ಚರ್ಚಿಸಲಾಗುವುದು. ಕಟ್ಟಡ ನಿರ್ಮಾಣವಾದ ನಂತರ ಸಂಘದ ಚಟುವಟಿಕೆಯೊಂದಿಗೆ ಕಾಲೇಜಿನ ಅನುಕೂಲಕ್ಕೂ ಬಿಟ್ಟು ಕೊಡಲಾಗುವುದು. ಕಾಲೇಜಿನಲ್ಲಿ ವೀರ ಯೋಧರ ಗೌರವಾರ್ಥ "ಹುತಾತ್ಮರ ಚೌಕ" ನಿರ್ಮಿಸಲು ನಿರ್ಧರಿಸ ಲಾಗಿದ್ದು, ಈಗಾಗಲೇ ಭೂಮಿಪೂಜೆ ನಡೆಸಲಾಗಿದೆ. ಅಲ್ಲದೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸೇರಿದಂತೆ ಇತರ ವಿಭಾಗದ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರ, ರಸಪ್ರಶ್ನೆ, ಪ್ರಬಂಧ, ಭಾಷಣ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು. ವನಮಹೋತ್ಸವದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸದಸ್ಯತ್ವವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಕಾಲೇಜಿನ ಹಳೆ ವಿದ್ಯಾಥಿಗಳು ಸಂಘದ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಸಹಕರಿಸುವಂತೆ ಡಾ. ಪಾರ್ವತಿ ಅಪ್ಪಯ್ಯ ಮನವಿ ಮಾಡಿದರು. ಪ್ರಸ್ತುತ ೭೦೦ ಸದಸ್ಯರಿದ್ದಾರೆ ಎಂದರು. ತಾ. ೧೨ ರಂದು ಕಾರ್ಯಕ್ರಮದ ಸಂದರ್ಭ ಸದಸ್ಯತ್ವ ಪಡೆದುಕೊಳ್ಳಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ೯೮೮೦೭೭೮೦೪೭ನ್ನು ಸಂಪರ್ಕಿಸ ಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್.ಡಿ. ಚರ್ಮಣ, ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ, ನಿರ್ದೇಶಕರಾದ ಮೊಣ್ಣಂಡ ಶೋಭಾ ಸುಬ್ಬಯ್ಯ, ಬಿ.ಕೆ. ನಂಜಪ್ಪ ಹಾಗೂ ಪಿ.ಎ. ದೇವಯ್ಯ ಉಪಸ್ಥಿತರಿದ್ದರು.