ಕುಶಾಲನಗರ, ಡಿ. ೪: ನದಿ ಜಲ ಮೂಲಗಳನ್ನು ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಜಿಲ್ಲಾಡಳಿತ ತಾ. ೧೭ ರಿಂದ ಕಾವೇರಿ ನದಿ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ.
ನದಿ ಉತ್ಸವ ಅಂಗವಾಗಿ ಕೊಡಗು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾವೇರಿ ನೀರಾವರಿ ನಿಗಮದ ಸಹಯೋಗದೊಂದಿಗೆ ನಡೆಯಲಿರುವ ನದಿ ಉತ್ಸವ ಕಾರ್ಯಕ್ರಮ ತಲಕಾವೇರಿ ಕ್ಷೇತ್ರದಲ್ಲಿ ತಾ. ೧೭ ರಂದು ಉದ್ಘಾಟನೆಗೊಳ್ಳಲಿದೆ. ನಂತರ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲೆಡೆ ಹರಿಯುವ ಕಾವೇರಿ ನದಿ ಮತ್ತು ಉಪನದಿಗಳ ತಟದ ವ್ಯಾಪ್ತಿಯಲ್ಲಿ
(ಮೊದಲ ಪುಟದಿಂದ) ೭ ದಿನಗಳ ಕಾಲ ನಿರಂತರ ಕಾರ್ಯಕ್ರಮ ನಡೆಯಲಿದೆ.
ಅಂದು ತಲಕಾವೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ನದಿ ಉತ್ಸವ ಕಾರ್ಯಕ್ರಮ ಚಾಲನೆಗೊಳ್ಳಲಿದೆ. ಭಾಗಮಂಡಲದಲ್ಲಿ ನದಿಗೆ ಆರತಿ ಮತ್ತು ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಾ. ೧೮ ರಂದು ಕುಶಾಲನಗರದಲ್ಲಿ ಕಾವೇರಿ ನದಿತಟದಲ್ಲಿ ನಡೆಯುವ ಕಾವೇರಿ ಉತ್ಸವ ಕಾರ್ಯಕ್ರಮದಲ್ಲಿ ಯೋಗ, ದ್ಯಾನ, ನದಿ ಉಳಿಸುವ ಬಗ್ಗೆ ಜನರಿಂದ ಪ್ರಮಾಣ ವಚನ ಸ್ವೀಕಾರ, ಸ್ವಚ್ಛತಾ ಕಾರ್ಯ ಮತ್ತು ಶಾಲಾ-ಕಾಲೇಜು ಮಕ್ಕಳಿಗೆ ನದಿ ಮತ್ತು ಪ್ರಕೃತಿ ಬಗ್ಗೆ ಹಲವು ಸ್ಪರ್ಧಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ನಂತರ ಜೀವನದಿ ಕಾವೇರಿಗೆ ಮಹಾ ಆರತಿ, ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಂ.ಡಿ. ನಾಗೇಶ್ ಮಾಹಿತಿ ನೀಡಿದ್ದಾರೆ.
ತಾ. ೧೯ ರಂದು ಮಂಡ್ಯ ವ್ಯಾಪ್ತಿಯ ಶ್ರೀರಂಗಪಟ್ಟಣದ ಕಾವೇರಿ ನದಿತಟದಲ್ಲಿ, ತಾ. ೨೦ ರಂದು ಟಿ. ನರಸೀಪುರ, ತಾ. ೨೧ ರಂದು ಹೇಮಾವತಿ ನದಿಯ ಗೋರೂರು ವ್ಯಾಪ್ತಿಯ ಯೋಗಾನಂದ ಸ್ವಾಮಿ ದೇವಾಲಯದ ಬಳಿ ನಂತರ ತಾ. ೨೨ ರಂದು ಯಡಿಯೂರು, ತಾ. ೨೩ ರಂದು ಕನಕಪುರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾವೇರಿ ಉತ್ಸವದಲ್ಲಿ ಜಿಲ್ಲಾ ಆಡಳಿತ ಸೇರಿದಂತೆ ವಿವಿಧ ಇಲಾಖೆ ಗಳು ಪಾಲ್ಗೊಳ್ಳಲಿವೆ ಹಾಗೂ ಜಿಲ್ಲೆಯ ಸಂಘ-ಸAಸ್ಥೆಗಳು ಧಾರ್ಮಿಕ ಮುಖ್ಯಸ್ಥರು ಪಾಲ್ಗೊಳ್ಳಲಿದ್ದು ನದಿ ಉತ್ಸವದ ಯಶಸ್ಸಿಗೆ ಕೈಜೋಡಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಚರ್ಚಿಸಲು ತಾ. ೬ ರಂದು ಮಡಿಕೇರಿ ಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಸಂಘಸAಸ್ಥೆಗಳ ಪ್ರಮುಖರ ಸಭೆ ನಡೆಯಲಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಂ.ಡಿ. ನಾಗೇಶ್ ತಿಳಿಸಿದ್ದಾರೆ.