ಸೋಮವಾರಪೇಟೆ, ಡಿ.೪: ಪ್ರಸಕ್ತ ವರ್ಷ ಸುರಿದ ಅಕಾಲಿಕ ಮಳೆಯಿಂದ ಜಿಲ್ಲಾದ್ಯಂತ ಕಾಫಿ, ಕರಿಮೆಣಸು ಸೇರಿದಂತೆ ಕೃಷಿ ಫಸಲು ನಷ್ಟವಾಗಿದ್ದು, ಸರ್ಕಾರದ ಪರಿಹಾರಕ್ಕಾಗಿ ಈವರೆಗೆ ೨೩,೮೧೯ ಮಂದಿ ರೈತರು ಅರ್ಜಿ ಸಲ್ಲಿಸಿದ್ದಾರೆ.

ಜಿಲ್ಲೆಯ ೫ ತಾಲೂಕುಗಳ ಪೈಕಿ ಸೋಮವಾರಪೇಟೆ ತಾಲೂಕಿನಿಂದಲೇ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಅಕಾಲಿಕ ಮಳೆಯಿಂದ ಅರೇಬಿಕಾ ಕಾಫಿ ಸೇರಿದಂತೆ ಕರಿಮೆಣಸು, ಭತ್ತ, ಮುಸುಕಿನ ಜೋಳ, ಅಡಿಕೆ, ಶುಂಠಿ ಹಾಗೂ ತರಕಾರಿ ಬೆಳೆಗಳು ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿವೆ. ಪರಿಹಾರಕ್ಕಾಗಿ ರೈತರು ನಾಡ ಕಚೇರಿ ಹಾಗೂ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಿಗೆ ಮುಗಿಬಿದ್ದು ಅರ್ಜಿ ಸಲ್ಲಿಸುತ್ತಿದ್ದು, ಈಗಾಗಲೇ ೨೩,೮೧೯ ಅರ್ಜಿಗಳು ಕಂದಾಯ ಇಲಾಖೆಗೆ ಸಲ್ಲಿಕೆಯಾಗಿವೆ.

ಜಿಲ್ಲೆಯ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ೩೫೯೮ ಅರ್ಜಿಗಳು ಸಲ್ಲಿಕೆಯಾಗಿವೆ. ಸೋಮವಾರಪೇಟೆ ತಾಲೂಕಿನಲ್ಲಿ ೭೪೫೪ ಅರ್ಜಿಗಳು, ವೀರಾಜಪೇಟೆ ತಾಲೂಕಿನಲ್ಲಿ ೫೫೮೯, ಪೊನ್ನಂಪೇಟೆಯಲ್ಲಿ ೩೩೦೪, ಕುಶಾಲನಗರಲ್ಲಿ ೩೮೭೪ ಅರ್ಜಿಗಳು ಪರಿಹಾರಕ್ಕಾಗಿ ಸಲ್ಲಿಕೆಯಾಗಿವೆ.

ಇವುಗಳ ಪೈಕಿ ಸೋಮವಾರಪೇಟೆ ತಾಲೂಕಿನಲ್ಲಿ ೩೭೮೧ ಅರ್ಜಿಗಳು, ಮಡಿಕೇರಿಯಲ್ಲಿ ೧೬೨೯, ವೀರಾಜಪೇಟೆಯಲ್ಲಿ ೩೩೫೦, ಪೊನ್ನಂಪೇಟೆಯಲ್ಲಿ ೧೬೬೧, ಕುಶಾಲನಗರದಲ್ಲಿ ೩೦೧೪ ಅರ್ಜಿಗಳನ್ನು ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳು ಗಣಕಯಂತ್ರದಲ್ಲಿ ನಮೂದಿಸಿ ಮಂಜೂರಾತಿ ಮಾಡಿದ್ದಾರೆ.

ತಾ.೩ ರವರೆಗಿನ ಮಾಹಿತಿ ಪ್ರಕಾರ ೨೩,೮೧೯ ಅರ್ಜಿಗಳ ಪೈಕಿ ೧೩,೪೩೫ ಅರ್ಜಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ೧೧೮೩ ಅರ್ಜಿಗಳನ್ನು ಆಯಾ ತಾಲೂಕಿನ ತಹಶೀಲ್ದಾರ್‌ಗಳು ತಮ್ಮ ಲಾಗಿನ್ ಮೂಲಕ ಅಪ್ರೂವಲ್ ಮಾಡಿದ್ದಾರೆ.

(ಮೊದಲ ಪುಟದಿಂದ) ೯೨೦೧ ಅರ್ಜಿಗಳನ್ನು ಮಂಜೂರಾತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಜಿಲ್ಲೆಯಾದ್ಯಂತ ಕಾಫಿ, ಕಾಳುಮೆಣಸು, ಭತ್ತ, ಬಾಳೆ, ಶುಂಠಿ, ಅಡಿಕೆ, ಮುಸುಕಿನ ಜೋಳ, ಗೆಣಸು ಸೇರಿದಂತೆ ಇನ್ನಿತರ ಬೆಳೆಗಳು ನಷ್ಟವಾಗಿರುವ ಬಗ್ಗೆ ರೈತರು ಅರ್ಜಿ ಸಲ್ಲಿಸುತ್ತಿದ್ದಾರೆ.

ತಾ.೭ರವರೆಗೆ ಅವಧಿ ವಿಸ್ತರಣೆ: ಅಕಾಲಿಕ ಮಳೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರದಿಂದ ಪರಿಹಾರ ವಿತರಿಸುವ ಸಂಬAಧ ಅರ್ಜಿ ಸ್ವೀಕರಿಸಲು ಇದ್ದ ಅವಧಿಯನ್ನು ತಾ.೭ರವರೆಗೆ ವಿಸ್ತರಿಸಲಾಗಿದೆ.

ಆರಂಭದಲ್ಲಿ ಕಳೆದ ನವೆಂಬರ್ ೩೧ರ ಗಡುವು ನಿಗದಿಪಡಿಸಲಾಗಿತ್ತು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಫಸಲು ಹಾನಿಯಾಗಿದ್ದು, ಸಾವಿರಾರು ರೈತರು ಒಮ್ಮೆಲೆ ಅರ್ಜಿ ಸಲ್ಲಿಸಲು ಕಷ್ಟಸಾಧ್ಯವಾಗಿದ್ದ ಹಿನ್ನೆಲೆ, ಇದರೊಂದಿಗೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಕಾಲಾವಕಾಶ ಕೋರಿದ್ದರಿಂದ ಇದೀಗ ತಾ. ೭ರವರೆಗೆ ಅರ್ಜಿ ಸ್ವೀಕರಿಸಲು ಕಂದಾಯ ಇಲಾಖೆ ಮುಂದಾಗಿದೆ. ಪ್ರಸಕ್ತ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಅತೀವೃಷ್ಟಿ ಯಲ್ಲಿಯೂ ಫಸಲು ನಷ್ಟ ಅನುಭವಿಸಿದ್ದು, ಕಾಫಿ ಮಂಡಳಿ ಸೇರಿದಂತೆ ಕಂದಾಯ, ಕೃಷಿ, ತೋಟಗಾರಿಕಾ ಇಲಾಖಾಧಿಕಾರಿಗಳು ಸರ್ವೆ ನಡೆಸಿ ಜಿಲ್ಲೆಯ ಕೆಲವೇ ಕೆಲವು ಗ್ರಾಮಗಳಲ್ಲಿ ಮಾತ್ರ ಶೇ.೩೩ರಷ್ಟು ಹಾನಿ ಯಾಗಿರುವ ಬಗ್ಗೆ ವರದಿ ಸಲ್ಲಿಸಿದ್ದರು.

ಈ ವರದಿಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು. ಕಳೆದ ಎರಡು ತಿಂಗಳಿನಿAದ ಮತ್ತೆ ಸುರಿದ ಅಕಾಲಿಕ ಮಳೆಗೆ ಕಾಫಿ ಸೇರಿದಂತೆ ಇನ್ನಿತರ ಬೆಳೆಗಳು ನಷ್ಟಕ್ಕೊಳಗಾಗಿದ್ದು, ಕಂದಾಯ ಸಚಿವ ಆರ್. ಅಶೋಕ್ ಅವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ಕಾಫಿ, ಕರಿಮೆಣಸು ಸೇರಿದಂತೆ ಇನ್ನಿತರ ಬೆಳೆಗಳು ಹಾನಿಗೀಡಾಗಿರುವುದನ್ನು ಖುದ್ದು ಪರಿಶೀಲನೆ ನಡೆಸಿದ್ದರು.

ಈ ಸಂದರ್ಭ ಕಳೆದ ಬಾರಿ ನೀಡಿದ ವರದಿಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಮತ್ತೊಮ್ಮೆ ಖುದ್ದು ಪರಿಶೀಲನೆ ನಡೆಸಿ, ನಿಖರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಕಾಫಿ ಮಂಡಳಿ, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖಾಧಿಕಾರಿಗಳು ಮರು ಸಮೀಕ್ಷೆ ನಡೆಸಿದ್ದು, ಇದೀಗ ಬೆಳೆನಷ್ಟ ಪರಿಹಾರಕ್ಕಾಗಿ ಅರ್ಜಿ ಸ್ವೀಕರಿಸಲಾಗುತ್ತಿದೆ.

ಇದೇ ಪ್ರಥಮ ಬಾರಿಗೆ ಸೋಮವಾರಪೇಟೆ ತಾಲೂಕಿನ ಎಲ್ಲಾ ಹೋಬಳಿ ಹಾಗೂ ಗ್ರಾಮಗಳಲ್ಲೂ ಬೆಳೆ ನಷ್ಟ ಉಂಟಾಗಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ಶೇ. ೩೩ಕ್ಕಿಂತಲೂ ಅಧಿಕ ಫಸಲು ನಷ್ಟ ಸಂಭವಿಸಿದ್ದು, ತಾಲೂಕಿನ ಎಲ್ಲಾ ಗ್ರಾಮಗಳ ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಜಿಲ್ಲೆಯ ಇತರ ತಾಲೂಕುಗಳಲ್ಲಿಯೂ ಬಹುತೇಕ ಗ್ರಾಮಗಳಲ್ಲಿ ಶೇ.೩೩ಕ್ಕಿಂತ ಅಧಿಕ ಹಾನಿಯಾಗಿರುವ ಬಗ್ಗೆ ಕಂದಾಯ ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ವರದಿ ನೀಡಿದ್ದು, ಅದರಂತೆ ಪರಿಹಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.

ತಾ. ೭ರವರೆಗೂ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿದ್ದು, ಈ ಅವಧಿಯೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಆಯಾ ಹೋಬಳಿ ವ್ಯಾಪ್ತಿಯ ನಾಡಕಚೇರಿ ಹಾಗೂ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. - ವಿಜಯ್