*ಗೋಣಿಕೊಪ್ಪಲು/ ಕಣಿವೆ, ಡಿ. ೪: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾವೇರಿ ವನ್ಯಜೀವಿ ವಿಭಾಗಕ್ಕೆ ಸೇರಿದ ಸಂಗಮ ವಲಯ ಅರಣ್ಯದಲ್ಲಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದ ಕಾಡಾನೆ ಮರಿಯೊಂದು ಇದೀಗ ತಿತಿಮತಿ ಬಳಿಯ ಮತ್ತಿಗೋಡು ಸಾಕಾನೆ ಶಿಬಿರ ಸೇರಿ ಆರೈಕೆ ಪಡೆಯುತ್ತಿದೆ.
ಅಂದಾಜು ೧ ತಿಂಗಳು ೧೦ ದಿನದ ಗಂಡು ಆನೆಮರಿ ತಾಯಿಯನ್ನು ಕಳೆದುಕೊಂಡು ಕಾಡಿನಲ್ಲಿ ಗೀಳಿಡುತ್ತಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅರಣ್ಯ ವೀಕ್ಷಣೆಗೆ ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಆನೆಮರಿ ಕಂಡು ಬಂದಿದೆ. ತಾಯಿ ಆನೆ ಇಲ್ಲದ್ದನ್ನು ಗಮನಿಸಿದ ಅರಣ್ಯ ಸಿಬ್ಬಂದಿಗಳು ಅಚ್ಚರಿಗೊಂಡು ಇಡೀ ದಿನ ಸ್ಥಳದಲ್ಲಿಯೇ ಇದ್ದು ಮರಿಯನ್ನು ರಕ್ಷಿಸಿದ್ದಾರೆ. ಒಂದು ದಿನ ಕಳೆದರೂ ತಾಯಿ ಆನೆಯ ಸುಳಿವು ಸಿಗದ ಹಿನ್ನೆಲೆ ಆಹಾರವಿಲ್ಲದೆ ಬಳಲಿದ್ದ ಮರಿಯನ್ನು ಹಿಡಿದು ತಂದು ಹಾಲು ನೀಡಿ ಪೋಷಿಸಲಾಗಿದೆ. ಕನಕಪುರದಲ್ಲಿ ಸಾಕಾನೆ ಶಿಬಿರ ಇಲ್ಲದ ಕಾರಣ, ಅದನ್ನು ಕೊಡಗು ಜಿಲ್ಲೆಯ ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ತಂದು ಬಿಟ್ಟಿದ್ದಾರೆ.
ಆನೆ ಮರಿ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಮತ್ತಿಗೋಡು ಸಾಕಾನೆ ಶಿಬಿರದ ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣ್ ಕುಮಾರ್ ಮಾತನಾಡಿ ಅರಣ್ಯ ಇಲಾಖೆಯ ಪಶುವೈದ್ಯಾಧಿಕಾರಿ ಗಳಾದ ಡಾ.ನಾಗರಾಜು, ಡಾ.ರಮೇಶ್ ಆನೆ ಮರಿ ಆರೋಗ್ಯವನ್ನು ತಪಾಸಣೆ ಮಾಡಿ ದ್ದಾರೆ. ಆನೆ ಮರಿ ಆರೋಗ್ಯಕರ ವಾಗಿದೆ. ೨ ಗಂಟೆಗೆ ಒಮ್ಮೆ ಒಂದು ಲೀಟರ್ ಹಸುವಿನ ಹಾಲು ಕುಡಿಸಲಾಗುತ್ತಿದೆ. ೬ ತಿಂಗಳ ಕಾಲ ಹಾಲು ಕುಡಿಸಿದ ಬಳಿಕ ಆಮೇಲೆ ಮಕ್ಕಳಿಗೆ ನೀಡುವಂತೆ ಮೃದು ಆಹಾರ ನೀಡಲಾಗುವುದು ಎಂದು ಹೇಳಿದರು.
ಇದೇ ಶಿಬಿರದಲ್ಲಿ ಇರುವ ೨೨ ಸಾಕಾನೆಗಳ ಪೈಕಿ, ಕಳೆದ ಆರು ತಿಂಗಳ ಹಿಂದೆ ಗಂಡು ಮರಿ ಯೊಂದಕ್ಕೆ ಜನ್ಮ ನೀಡಿದ ಬಾಣಂತಿ ವರಲಕ್ಷಿö್ಮ ಎಂಬ ಸಾಕಾನೆಯೊಂದಿಗೆ ಈ ಹಸುಳೆಯನ್ನು
(ಮೊದಲ ಪುಟದಿಂದ) ಸೇರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಆ ತಾಯಿ ವರಲಕ್ಷಿö್ಮ ಈ ಹಸುಳೆಯನ್ನು ತನ್ನತ್ತ ಸೇರಿಸಿಕೊಳ್ಳಲು ಒಪ್ಪುತ್ತಲೇ ಇಲ್ಲ ಎಂದು ಕಿರಣ್‌ಕುಮಾರ್ ‘ಶಕ್ತಿ’ಗೆ ವಿವರಿಸಿದ್ದಾರೆ. ಈ ಹಸುಳೆ ಮರಿಯನ್ನು ಶಿಬಿರದ ಮಾವುತ ಮಂಜು ಕಾವಾಡಿ ಮಹದೇವ ಆರೈಕೆ ಮಾಡುತ್ತಿದ್ದಾರೆ. ಹಸುಳೆ ಮರಿಯ ಆರೋಗ್ಯ ದೃಷ್ಟಿಯಿಂದ ಈ ಮರಿಯತ್ತ ಸಾರ್ವಜನಿಕರ ಭೇಟಿ ನಿಷೇಧಿಸಿದ್ದೇವೆ ಎಂದು ಕಿರಣ್‌ಕುಮಾರ್ ತಿಳಿಸಿದರು.
-ಎನ್.ಎನ್. ದಿನೇಶ್ /
ಕೆ.ಎಸ್. ಮೂರ್ತಿ