ಮಡಿಕೇರಿ, ಡಿ. ೧: ಹಾತೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೧೯೬೯ ರಿಂದ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಹಾತೂರು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಬಾಂಡ್ ಗಣಪತಿ ನೆರವೇರಿಸಿದರು. ಹಾತೂರು ಸಹಕಾರ ಸಂಘ ಕಾಲಘಟ್ಟದಲ್ಲಿ ಬದಲಾಗುತ್ತಾ ವಿ.ಎಸ್.ಎಸ್.ಎನ್. ನಂತರದಲ್ಲಿ ಇದೀಗ ಕೃಷಿ ಪತ್ತಿನ ಸಹಕಾರ ಸಂಘದವರೆಗಿನ ಬದಲಾವಣೆಗಳ ಹಾಗೂ ಸಂಘದ ಲಾಭಾಂಶ ಹಾಗೂ ಸದಸ್ಯ ರೈತರಿಗೆ ಸಿಗುವ ಲಾಭಾಂಶ ಹಾಗೂ ಸವಲತ್ತುಗಳ ಬಗ್ಗೆ ಬಾಂಡ್ ಗಣಪತಿ ತಿಳಿಸಿದರು.
೧೯೬೯ ರಿಂದ ೧೯೮೦ ರವರೆಗೆ ಸೇವೆ ಸಲ್ಲಿಸಿ ಅಧ್ಯಕ್ಷರಾಗಿದ್ದ ದೊಡ್ಡಮನೆ ಎ. ಸುಬ್ರಮಣಿ, ೧೯೭೮ ರಿಂದ ೧೯೮೬ ರವರೆಗೆ ಸೇವೆ ಸಲ್ಲಿಸಿ ಅಧ್ಯಕ್ಷರಾಗಿದ್ದ ಕೊಡಂದೇರ ರವಿ ಕುಶಾಲಪ್ಪ, ನಿರ್ದೇಶಕರಾಗಿ ೧೧ ವರ್ಷ ಹಾಗೂ ಅಧ್ಯಕ್ಷರಾಗಿ ೧೦ ವರ್ಷ ಸೇವೆ ಸಲ್ಲಿಸಿದ್ದ ಮುಕ್ಕಾಟಿರ ರವಿ ನಾಚಪ್ಪ ಅವರುಗಳನ್ನು ಸನ್ಮಾನಿಸಲಾಯಿತು.
ಕಳೆದ ೧೪ ವರ್ಷಗಳಿಂದ ಅಧ್ಯಕ್ಷರಾಗಿರುವ ಕೊಡಂದೇರ ಬಾಂಡ್ ಗಣಪತಿ ಅವರನ್ನು ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ ಕಳೆದ ೬ ವರ್ಷಗಳ ನಿರಂತರ ಸೇವೆಗಾಗಿ ಹಾಗೂ ವಿವಿಧ ಸಂಘ-ಸAಸ್ಥೆಗಳಲ್ಲಿನ ಇವರ ಸೇವೆಗಾಗಿ ಹಾತೂರು, ಕೊಳತ್ತೋಡು, ಬೈಗೋಡು, ಈಚೂರು, ಕುಂದಾ ಗ್ರಾಮದ ಸದಸ್ಯರಿಂದ ಸನ್ಮಾನಿಸಲಾಯಿತು.
ಹಾತೂರು ಪ್ರೌಢಶಾಲೆಯಲ್ಲಿ ಸುದೀರ್ಘ ೩೮ ವರ್ಷಗಳ ಸೇವೆ ಸಲ್ಲಿಸಿದ್ದ ಚೇಂದAಡ ಶಂಭು ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು.