ಸೋಮವಾರಪೇಟೆ, ಡಿ.೧: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಯುವಕನ ಕುಟುಂಬಕ್ಕೆ ಪಟ್ಟಣ ಪಂಚಾಯಿತಿ ಪರಿಹಾರ ನೀಡಬೇಕೆಂದು ಮಾನವ ಹಕ್ಕುಗಳು ಹಾಗು ಭ್ರಷ್ಟಾಚಾರ ವಿರೋಧಿ ಸಂಸ್ಥೆ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಪ.ಪಂ. ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪಟ್ಟಣದ ಮಹದೇಶ್ವರ ಬಡಾವಣೆ ನಿವಾಸಿ ಲಕ್ಷö್ಮಣ ಹಾಗೂ ಜಯಮ್ಮ ದಂಪತಿ ಪುತ್ರ ಮಂಜುನಾಥ್ (೨೪) ಎಂಬವರು ಕಳೆದ ತಾ. ೭ರಂದು ರಾತ್ರಿ ಪುಟ್ಪಪ್ಪ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪದ ಕೆಳಗೆ ಬಿದ್ದ ಪರಿಣಾಮ ವಿದ್ಯುತ್ ಹರಿದು ಮೃತಪಟ್ಟಿದ್ದರು.
ಪಂಚಾಯಿತಿ ನಿರ್ಲಕ್ಷö್ಯದಿಂದ ಹೈಮಾಸ್ಟ್ ಕಂಬದಲ್ಲಿ ವಿದ್ಯುತ್ ಪ್ರವಹಿಸುತಿತ್ತು. ಇದಕ್ಕೆ ಯುವಕನೋರ್ವ ಬಲಿಯಾಗಿರುವುದರಿಂದ ಪರಿಹಾರ ನೀಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿರುವ ಹೈಮಾಸ್ಟ್ ದೀಪಗಳು ಉರಿಯುತ್ತಿಲ್ಲ. ಹಾಳಾದರೆ ದುರಸ್ತಿ ಪಡಿಸುತ್ತಿಲ್ಲ. ಪಂಚಾಯಿತಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರೆ ಘಟನೆಗೆ ಹೊಣೆಯಾಗಿದ್ದಾರೆ. ಪ್ರಕರಣ ನಡೆದು ಇಪ್ಪತ್ತು ದಿನ ಕಳೆದರೂ, ಪಂಚಾಯಿತಿ ಪರಿಹಾರ ನೀಡುವ ಮಾತುಕತೆ ನಡೆಸಿಲ್ಲ. ಮೃತನ ಕುಟುಂಬಕ್ಕೆ ೧೦ಲಕ್ಷ ರೂ.ಗಳ ಪರಿಹಾರ ನೀಡಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು ಎಂದು ಸಂಸ್ಥೆಯ ತಾಲೂಕು ಅಧ್ಯಕ್ಷ ಪಿ.ಮಧು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭ ಪದಾಧಿಕಾರಿಗಳಾರ ಎಂ.ರಮೇಶ್, ಟಿ.ಜೆ.ಗಣೇಶ್ ಕುಮಾರ್, ರೋಹಿತ್ ಉಪಸ್ಥಿತರಿದ್ದರು.