ಮಡಿಕೇರಿ, ನ. ೩೦: ೨೦೧೬ರಲ್ಲಿ ಕುಶಾಲನಗರ ಸಮೀಪ ಗುಡ್ಡೆಹೊಸೂರಿನಲ್ಲಿ ನಡೆದಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ೯ ಮಂದಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ನೀಡಿದೆ.
೨೦೧೬ರ ಆಗಸ್ಟ್ ೧೪ ರಂದು ರಾತ್ರಿ ಕುಶಾಲನಗರದಲ್ಲಿ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ಯಾತ್ರೆಯ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆಟೋಚಾಲಕ, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಪ್ರವೀಣ್ ಪೂಜಾರಿ ಮನೆಗೆ ಮರಳುತ್ತಿದ್ದಾಗ ಬಾಡಿಗೆ ನೆಪದಲ್ಲಿ ಅವರನ್ನು ಕರೆದೊಯ್ದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬAಧ ತನಿಖೆ ಕೈಗೊಂಡ ಪೊಲೀಸರು ೨೦೧೬ರ ಆ. ೨೪ ರಂದು ಆರೋಪಿಗಳಾದ ಎಂ.ಹೆಚ್. ತುಫೈಲ್, ನಯಾಜ್ ಅಹ್ಮದ್, ಕೆ.ಇ. ಇಲಿಯಾಸ್, ಮುಸ್ತಫ, ಮಹಮದ್ ಅಫ್ರಿನ್, ಇರ್ಫಾನ್, ಮುಜೀಬ್, ಟಿ.ಎ. ಹ್ಯಾರಿಸ್ ಹಾಗೂ ಕೆ.ಇ. ಶರೀಫ್ ಎಂಬವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರು ತಿಂಗಳ ಬಳಿಕ ಆರೋಪಿಗಳು ಜಾಮೀನಿನಡಿ ಬಿಡುಗಡೆಗೊಂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿ ಮುಂದುವರಿದಿತ್ತು.
೬೧ ಸಾಕ್ಷಿಗಳ ಪೈಕಿ ೨೭ ಸಾಕ್ಷಿಗಳ ವಿಚಾರಣೆ ಕೈಗೊಳ್ಳಲಾಯಿತಾದರೂ ಸೂಕ್ತ ಸಾಕ್ಷಾಧಾರಗಳ ಕೊರತೆ ಹಿನ್ನೆಲೆ ಆರೋಪಿಗಳ ಮೇಲೆ ಆರೋಪ ಸಾಬೀತಾಗದ ಕಾರಣ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಭೀಮರಾಮ್ ಜಿನರಾಳ್‌ಕರ್ ಲಗಮಪ್ಪ ಅವರು ೯ ಮಂದಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದರು.
ಆರೋಪಿಗಳ ಪರ ವಕೀಲರಾದ ಅಬೂಬಕರ್, ಸೂಫಿಯಾನ್, ಅಬುತಾಹಿರ್ ವಾದ ಮಂಡಿಸಿದರು.